ಹೊಸದಿಗಂತ ವರದಿ ಮಡಿಕೇರಿ:
ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ರೂ.ಗಳ ಅನುದಾನ ನೀಡುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮಕ್ಕೆ ಕೊಡಗು ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ಪ್ರಮುಖರು, ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹತ್ತು ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಣೆ ಮಾಡಿರುವುದು ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಇತರ ಸಮುದಾಯಗಳಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪೊಳ್ಳು ಗ್ಯಾರಂಟಿಗಳಿಗೆ ಮಾರುಹೋದ ಕರ್ನಾಟಕದ ಜನತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ ಅಧಿಕಾರಕ್ಕೆ ಬಂದು ಏಳು ತಿಂಗಳುಗಳು ಕಳೆದರೂ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಏಳು ರೂ.ಗಳನ್ನು ಕೂಡಾ ತರುವಲ್ಲಿ ವಿಫಲರಾಗಿರುವ ಜಿಲ್ಲೆಯ ಶಾಸಕರು, ಮುಖ್ಯಮಂತ್ರಿಗಳು ಮುಸ್ಲಿಂ ಸಮುದಾಯವೊಂದಕ್ಕೇ ಹತ್ತು ಸಾವಿರ ಕೋಟಿ ಕೊಡುವುದಾಗಿ ನೀಡಿರುವ ಹೇಳಿಕೆಯನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಬಿಜೆಪಿ ಪ್ರಮುಖರು ಪ್ರಶ್ನಿಸಿದ್ದಾರೆ.
ಹಾಗಿದ್ದಲ್ಲಿ ಕೊಡಗಿನ ಎರಡು ಕ್ಷೇತ್ರಗಳ ಅಭಿವೃದ್ಧಿಗಾಗಿ ಅನುದಾನ ಘೋಷಿಸುವಂತೆ ಮಾಡಿ ಇದು ಯಾವುದೇ ಸಮುದಾಯಕ್ಕೆ ಸೀಮಿತವಾಗಿರದೆ ಕೊಡಗಿನ ಅಭಿವೃದ್ಧಿಗಾಗಿ ಮಾತ್ರ ಬಳಕೆಯಾಗುವಂತೆ ನಮ್ಮಿಬ್ಬರು ಶಾಸಕರು ಅನುದಾನ ತರಲಿ ಮತ್ತು ಒಂದೇ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ಅನುದಾನ ನೀಡುವುದಾಗಿ ನೀಡಿರುವ ಹೇಳಿಕೆಯಿಂದ ತಮಗೂ ಮುಜುಗರವಾಗುತ್ತಿದೆ ಎಂಬುದನ್ನು ಮುಖ್ಯ ಮಂತ್ರಿಗಳಿಗೆ ಮನವರಿಕೆ ಮಾಡಲಿ ಎಂದು ಬಿಜೆಪಿ ಪ್ರಮುಖರು ಸಲಹೆ ನೀಡಿದ್ದಾರೆ.
ಕೊಡಗಿನ ಹಲವು ಭಾಗಗಳಲ್ಲಿ ಬರದಿಂದ, ಆನೆ ಹಾವಳಿಯಿಂದ ರೈತರು ಕಂಗೆಟ್ಟಿರುವ ಈ ಸಂದರ್ಭದಲ್ಲಿ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿಗಳ ನಡೆಯನ್ನು ಕೊಡಗು ಬಿಜೆಪಿ ಖಂಡಿಸುತ್ತದೆ ಎಂದು ಪಕ್ಷದ ಪ್ರಮುಖರು ತಿಳಿಸಿದ್ದಾರೆ.