-ನಾಗರಾಜ್ ಮಾಡ್ಲಾಕನಹಳ್ಳಿ
ಮರಿಯಮ್ಮನಹಳ್ಳಿ: “ಏ ಸೋದರತ್ತಿ ಇದಿಯೇನ ಬೇ? ನಿನ್ನ ಸೊಸಿಗೆ ಸೀರಿ ಕೊಡಿಸಿದಿ ಇಲ್ಲೊ? ಲಘುನ ಹೊಸ ಅರಬಿ ಕೊಡಸಿ ದೇವರಿಗೆ ಹೋಗ್ರಿ” ಇದು ನಿಜ ಆಚರಣೆಯೊ ಸುಳ್ಳು ಸುದ್ದಿಯೊ ತಿಳಿದಿಲ್ಲ..ಆದರೆ ಈ ವದಂತಿ ದಿನೇ ದಿನೇ ವ್ಯಾಪಕವಾಗಿ ಹರಡಿ ಮಹಿಳೆಯರೆಲ್ಲ ಬಟ್ಟೆ ಅಂಗಡಿಗೆ ಮುಗಿಬಿದ್ದುರವುದಂತೂ ಸತ್ಯ. ಗ್ರಾಮೀಣ ಪ್ರದೇಶದ ಮಹಿಳೆಯರು ಪಟ್ಟಣದ ಬಟ್ಟೆ ಅಂಗಡಿಗಳಿಗೆ ಮುಗಿಬಿಳುತ್ತಿರುವುದು ಸಾಮಾನ್ಯ ಸನ್ನಿವೇಶವಾಗಿದೆ.
ಒಂಟಿ ಸೋದರ ಸೊಸೆಗೆ ಸೋದರ ಮಾವ ಇಲ್ಲ ಸೋದರತ್ತೆ ಸೀರೆ ಅಥವಾ ಡ್ರೆಸ್ ಕೊಡಿಸಬೇಕು. ನಂತರ ದೇವರ ದರ್ಶನ ಮಾಡಿ ಸೊಸೆಯನ್ನು ವಾಪಸ್ ತಮ್ಮೂರಿಗೆ ಕಳಿಸಬೇಕು. ಇಲ್ಲದಿದ್ದರೆ ಕೆಡಕಾಗುತ್ತದೆ ಎಂಬ ವದಂತಿ ಗ್ರಾಮೀಣ ಭಾಗದಲ್ಲಿ ಹರಡಿದ ಕಾರಣ, ಬಟ್ಟೆ ಅಂಗಡಿಗಳಲ್ಲಿ ಭರಪೂರ ವ್ಯಾಪಾರ ನಡೆಯುತ್ತಿದೆ.
ಈ ಹಿಂದೆಯೂ ಅಕ್ಕಂದಿರು ತಮ್ಮನಿಗೆ ರುಮಾಲು ಹಾಕಬೇಕು, ಒಬ್ಬನೇ ಮಗನಿದ್ದವನಿಗೆ ಸೋದರತ್ತೆ ಬೆಳ್ಳಿ ಕಡಗ ತೊಡಿಸಬೇಕು, ನಂತರ ಆ ಅತ್ತೆಗೆ ಉಡುಗೊರೆ ಕೊಡಬೇಕು ಎಂಬ ವದಂತಿ ಹರಡಿತ್ತು. ಆಗ ಬೆಳ್ಳಿ-ಬಂಗಾರ ಖರೀದಿಸಲು ಅಂಗಡಿಗಳಿಗೆ ಜನ ಮುಗಿಬಿದ್ದಿದ್ದರು. ನಂತರ ತಾಯಿಗೆ ಹೊಸ ಸೀರೆ ಕೊಡಿಸದಿದ್ದರೆ ಕೆಡಕಾಗುತ್ತದೆ ಎಂಬ ವದಂತಿ ಸಹ ಹರಡಿತ್ತು. ಮಹಿಳೆಯರು ಮಾಂಗಲ್ಯದಲ್ಲಿರುವ ಹವಳ ತೆಗೆಯಬೇಕು ಇಲ್ಲವಾದರೆ ಗಂಡನಿಗೆ ಕೇಡಾಗಿ ಸಾವು ಬರಬಹುದು ಎಂಬ ವದಂತಿ ಹರಡಿದಾಗ ಮಹಿಳೆಯರು ರಾತ್ರೋರಾತ್ರಿ ಮಾಂಗಲ್ಯದ ಹವಳನ್ನು ಕುಟ್ಟಿ ಪುಡಿ ಮಾಡಿದ್ದರು.
ಇದಕ್ಕೀಗ ಹೊಸ ಸೇರ್ಪಡೆ ಎಂಬಂತೆ ಸೋದರ ಸೊಸೆಗೆ ಸೋದರ ಮಾವ ಉಡುಗೊರೆ ಕೊಡಬೇಕು. ಇಲ್ಲದಿದ್ದರೆ ಕೆಡಕಾಗುತ್ತದೆ ಎಂಬ ವದಂತಿ ಗ್ರಾಮೀಣ ಭಾಗದಲ್ಲಿ ಹರಡಿದೆ. ಇಂತಹ ಮೂಢನಂಬಿಕೆ ಇನ್ನೂ ಇರುವುದು ವಿಪರ್ಯಾಸ. ಬಟ್ಟೆ ಅಂಗಡಿಗಳಲ್ಲಿ ಉಳಿದ ಬಟ್ಟೆ ಮಾರಾಟ ಮಾಡಲು ಬಟ್ಟೆ ಅಂಗಡಿ ಮಾಲೀಕರು ಸುದ್ದಿ ಹಬ್ಬಿಸುತ್ತಿದ್ದಾರೋ ಅಥವಾ ಇನ್ನ್ಯಾರೋ ಜನ ಗೊಂದಲ ಸೃಷ್ಟಿಸಿದ್ದಾರೊ ಇನ್ನೂ ತಿಳಿಯದಾಗಿದೆ. ಒಟ್ಟಾರೆ ಈ ಸುದ್ದಿಯಿಂದ ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿರುವುದಂತೂ ನಿಜ.