ಹೊಸದಿಗಂತ ವರದಿ, ಮಂಡ್ಯ :
ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಹಳ್ಳಿ ಹಳ್ಳಿಗಳಲ್ಲೂ ಯುವಜನರು ಮತ್ತು ರೈತರು ತಮ್ಮ ರಾಸುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು.
ಉತ್ತರಾಯಣ ಕಾಲದ ಮೊದಲ ಹಬ್ಬ ಸಂಕ್ರಾಂತಿಯು ರೈತ ಸಮುದಾಯಕ್ಕೆ ವಿಶೇಷವಾದದು. ತಾವು ಸಾಕಿದ ರಾಸುಗಳನ್ನು ಅಲಂಕರಿಸಿ ಅವುಗಳೊಂದಿಗೆ ಫೋಟೋ ತೆಗೆಸಿಕೊಂಡು, ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಆಚರಿಸುತ್ತಾರೆ. ಈ ವರ್ಷ ಕೋವಿಡ್ ಹರಡುವಿಕೆ ಆತಂಕದ ನಡುವೆಯೂ ಸಂಭ್ರಮದಿಂದ ಹಬ್ಬ ಆಚರಿಸಿದರು.
ಹಳ್ಳಿಗಳಲ್ಲಿ ರೈತರು, ರಾಸುಗಳ ಮಾಲೀಕರು ಸಾಮೂಹಿಕವಾಗಿ ರಾಸುಗಳನ್ನು ಕಿಚ್ಚು ಹಾಯಿಸಿದರು. ಹಬ್ಬದ ಹಿನ್ನಲೆಯಲ್ಲಿ ಎಲ್ಲಡೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ಸಾಂಕೇತಿಕವಾಗಿ ವಿಶೇಷ ಪೂಜೆ ಜರುಗಿದವು. ಧನುರ್ಮಾಸದ ಪ್ರಯುಕ್ತ ಕಳೆದ ಒಂದು ತಿಂಗಳಿಅದ ನಾನಾ ಪೂಜೆಗಳು ನಡೆಯುತ್ತಿದ್ದರು. ಭಾನುವಾರ ಧನುರ್ಮಾಸದ ಪೂಜೆ ಸಮಾಪ್ತಿಗೊಳಿಸಿ, ಉತ್ತರಾಯಣ ಪುಣ್ಯಕಾಲವಾದ ಸೋಮವಾರ ಮಕರ ಸಂಕ್ರಾಅತಿ ಆಚರಿಸಲಾಯಿತು.