April 26, 2026
Sunday, April 26, 2026
spot_img

ಒಬ್ಬರಿಗೆ ಮನೆಯೂಟ ನೀಡಿದರೆ ಉಳಿದವರ ಕಥೆಯೇನು? ಪವಿತ್ರಾ ಸೌಲಭ್ಯದ ವಿರುದ್ಧ ಸಿಡಿದೆದ್ದ ಜೈಲು ಸಿಬ್ಬಂದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ಪವಿತ್ರಾ ಗೌಡ ಅವರಿಗೆ ಸಿಕ್ಕಿದ್ದ ‘ಮನೆಯೂಟ’ದ ಸವಲತ್ತಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ಅನುಮತಿಯ ಮೇರೆಗೆ ಜನವರಿ 2 ರಿಂದ ಮನೆಯೂಟ ಸೇವಿಸುತ್ತಿದ್ದ ಪವಿತ್ರಾ ವಿರುದ್ಧ ಜೈಲಧಿಕಾರಿಗಳು ಸೋಮವಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಜೈಲಿನಲ್ಲಿ ಪ್ರಸ್ತುತ 4,700ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಪವಿತ್ರಾ ಗೌಡ ಅವರಿಗೆ ಮಾತ್ರ ವಿಶೇಷ ಸವಲತ್ತು ನೀಡಿದರೆ, ಇದು ಇತರ ಕೈದಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಎಲ್ಲರೂ ಮನೆಯೂಟಕ್ಕಾಗಿ ಬೇಡಿಕೆ ಇಟ್ಟರೆ ಜೈಲಿನ ಶಿಸ್ತು ಮತ್ತು ವ್ಯವಸ್ಥೆ ಹದಗೆಡಲಿದೆ ಎಂಬುದು ಪೊಲೀಸರ ವಾದ.

ಜೈಲಿನಲ್ಲಿ ಈಗಾಗಲೇ ಉತ್ತಮ, ಶುಚಿ ಹಾಗೂ ರುಚಿಯಾದ ಆಹಾರವನ್ನೇ ನೀಡಲಾಗುತ್ತಿದೆ. ಇದುವರೆಗೆ ಪವಿತ್ರಾ ಸೇರಿದಂತೆ ಯಾವುದೇ ಕೈದಿಗಳು ಜೈಲಿನ ಆಹಾರ ಸೇವಿಸಿ ಅನಾರೋಗ್ಯಕ್ಕೆ ಈಡಾಗಿಲ್ಲ. ಹೀಗಿರುವಾಗ ಪ್ರತ್ಯೇಕ ಮನೆಯೂಟದ ಅಗತ್ಯವಿಲ್ಲ ಎಂದು ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ.

ಈ ಕುರಿತು ಜೈಲಧಿಕಾರಿಗಳು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು, ಮನೆಯೂಟದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸಜ್ಜಾಗಿದ್ದಾರೆ.

ಪವಿತ್ರಾ ಗೌಡ ಅವರ ಸತತ ಕಾನೂನು ಹೋರಾಟದ ಫಲವಾಗಿ ಸಿಕ್ಕಿದ್ದ ಈ ವಿಶೇಷ ಸವಲತ್ತು ಈಗ ಪೊಲೀಸರ ಈ ನಡೆಯಿಂದಾಗಿ ಮತ್ತೆ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !