ಹೊಸದಿಗಂತ ವರದಿ,ಯಲ್ಲಾಪುರ:
ತಾಲೂಕಿನ ಹುತ್ಕಂಡ ಗ್ರಾಮದ ಕಬ್ಬಿನಗದ್ದೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ ೬ರಂದು ಮಧ್ಯರಾತ್ರಿ ಕಬ್ಬಿನಗದ್ದೆಯ ದೇವೇಂದ್ರ ಹೆಗಡೆಯವರ ಮನೆಯ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಹುಲಿ ದಾಳಿ ನಡೆಸಿದೆ. ಗ್ರಾಮದಲ್ಲಿ ಇತ್ತೀಚೆಗೆ ನಾಯಿ, ಹಸು-ಕರುಗಳು ಹುಲಿ ದಾಳಿಗೆ ತುತ್ತಾಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಹಿಂದೆ ಅಪರೂಪಕ್ಕೆ ಕೇಳಿಬರುತ್ತಿದ್ದ ಇಂಥ ಪ್ರಕರಣಗಳು ಈಗ ದಿನೇ ದಿನೇ ಘಟಿಸುತ್ತಿದ್ದು, ಜಾನುವಾರುಗಳ ರಕ್ಷಣೆ ಸವಾಲೆನಿಸಿದೆ.
ಕಬ್ಬಿನಗದ್ದೆಯ ದೇವೇಂದ್ರ ಹೆಗಡೆಯವರ ಮನೆಯಲ್ಲಿ ಎಂದಿನಂತೆ ಹಸು-ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ಏ.೬ರ ರಾತ್ರಿ ಸುಮಾರು ೨ ಗಂಟೆಗೆ ಕರುವು ಜೋರಾಗಿ ಕೂಗುವ ಸಪ್ಪಳವಾಗಿದೆ. ಅದರಿಂದ ಎಚ್ಚರಗೊಂಡ ಮನೆ ಮಂದಿ ಎದ್ದು ಕೊಟ್ಟಿಗೆಗೆ ಹೋಗುವಷ್ಟರಲ್ಲಿ ಹುಲಿ ಕಣ್ಮರೆಯಾಗಿದೆ. ಹುಲಿಯ ದಾಳಿಗೆ ಸಿಲುಕಿದ ಕರುವಿನ ಕುತ್ತಿಗೆ, ಮುಖ, ಹೊಟ್ಟೆಯ ಭಾಗಕ್ಕೆ ತೀವ್ರ ಗಾಯವಾಗಿದ್ದು ಕರು ಜೀವನ್ಮರಣ ಹೋರಾಟದಲ್ಲಿದೆ. ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಿದ ಅರಣ್ಯಾಧಿಕಾರಿಗಳು ಇದು ’ಕಪ್ಪು ಚಿರತೆ’ ಇರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
ಹುತ್ಕಂಡ ಗ್ರಾಮದಲ್ಲಿ ಹುಲಿ ದಾಳಿಗೆ ಸಿಲುಕಿ ಈಗಾಗಲೇ ಅನೇಕ ಜಾನುವಾರುಗಳು, ನಾಯಿಗಳು ಪ್ರಾಣ ಕಳೆದುಕೊಂಡಿವೆ. ಹಲವೆಡೆಗಳಲ್ಲಿ ಮನೆಯ ಅಂಗಳದಲ್ಲಿಯೇ ರಾತ್ರಿ ಹುಲಿ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಜನ ಆತಂಕದಲ್ಲಿ ಬದುಕುವಂತಾಗಿದೆ. ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಂಡು, ಜನ ಮತ್ತು ಜಾನುವಾರುಗಳಿಗೆ ರಕ್ಷಣೆ ನೀಡಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳ ಮುಂದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡುಪ್ರಾಣಿಗಳಿಂದ ತಮ್ಮ ಕೃಷಿಭೂಮಿ, ಬೆಳೆ ಮತ್ತು ಸಾಕುಪ್ರಾಣಿಗಳಿಗೆ ರಕ್ಷಣೆ ಇಲ್ಲದಾಗಿದೆ, ಕತ್ತಲಾದ ಮೇಲೆ ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟವಾಗಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿ, ವನ್ಯಮೃಗಗಳಿಂದ ರಕ್ಷಣೆ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.