ಹೊಸದಿಗಂತ ವರದಿ,ಚನ್ನರಾಯಪಟ್ಟಣ:
ಕಾವೇರಿ ಜಲಾನಯನ ಪ್ರದೇಶದ 10 ಜನ ಲೋಕಸಭಾ ಸದಸ್ಯರು ಗೆದ್ದು ಲೋಕಸಭೆಗೆ ಹೋದರೆ ನಮಗೆ ಶಕ್ತಿ ಬರುತ್ತದೆ ಈ ಮೂಲಕ ಕಾವೇರಿ ಹೋರಾಟಕ್ಕೂ ದ್ವನಿಗೂಡಿಸಲು ಸಹಕಾರಿ ಆಗುತ್ತದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಮಂಜಿಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹೇಮಾವತಿ ಜಲಾಶಯ ಕಟ್ಟಿ ಹಾಸನ ಜಿಲ್ಲೆಗೆ ಕುಡಿಯುವ ನೀರು ಒದಗಿಸಲು ಮುಂದಾಗಿದ್ದು ಯಾರು, ಆದರೆ ಇಂದು ಹೇಮಾವತಿ ನೀರು ಕುಡಿಯಲು ನಮಗೆ ಅಡ್ಡಗಾಲು ಹಾಕುವವರು ಇದ್ದಾರೆ ಅಲ್ಲದೆ ಈ ಹಿಂದೆ ಕಾವೇರಿ ನೀರನ್ನು ರಾಜ್ಯದ ಜನರಿಗೆ ಕುಡಿಯಲು ಬಿಡದ ಪರಿಸ್ಥಿತಿ ಇತ್ತು ಈ ಬಾರಿ ರಾಜ್ಯ ಸುತ್ತಿ ಹಳೆ ಮೈಸೂರು ಭಾಗದಲ್ಲಿ ಕನಿಷ್ಠ 10 ಲೋಕಸಭಾ ಸದಸ್ಯರನ್ನು ಗೆಲ್ಲಿಸಿ ಈ ಹಿಂದೆ ಒಂದು ಲೋಟ ನೀರನ್ನು ಕೊಡುವಲ್ಲ ಎಂಬ ಹೇಳಿಕೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಗೆ ಉತ್ತರ ನೀಡುತ್ತೇವೆ ಎಂದರು.
ಇಡೀ ಬೆಂಗಳೂರು ಒಬ್ಬ ಮಂತ್ರಿ ಹಿಡಿತದಲ್ಲಿದೆ. ಬಿ.ಡಿ. ಏ. ಕಾರ್ಪೋರೇಶನ್, ಪ್ಲಾನಿಂಗ್ ಅತಾರಿಟಿ ಸೇರಿದಂತೆ ಪ್ರಮುಖ ಆದಾಯದ ಮೂಲಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಲೂಟಿ ಹೊಡೆಯುತ್ತಿದ್ದಾರೆ, ಬೆಂಗಳೂರಿನಲ್ಲಿ ನನ್ನ ಅಳಿಯ ಡಾ.ಮಂಜುನಾಥ್ ಚುನಾವಣೆಗೆ ನಿಂತಿದ್ದಾರೆ ಆದರೆ ಅವರನ್ನು ತೆಗೆಯಲೇ ಬೇಕು ಎಂಬ ಉದ್ದೇಶ ಹೊಂದಿರುವ ಅಣ್ಣಾ ತಮ್ಮಂದಿರು ಇಲ್ಲದ ತಂತ್ರ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ರೇವಣ್ಣ ಅವರಷ್ಟು ಕೆಲಸ ಮಾಡಿದ ಯಾರಾದ್ರೂ ಶಾಸಕ ಇದ್ದರೆ ಅವರು ನಮ್ಮ ಮುಂದೆ ಬಂದು ನಿಲ್ಲಲಿ, ಇಂಜಿನಿಯರಿಂಗ್ ಕಲಿಯುವ ಆಸಕ್ತಿ ಹೊಂದಿರುವ ಮಕ್ಕಳಿಗೆ ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಲು ಆಗುತ್ತಿದ್ದ ಕಷ್ಟ ಅರಿತು, ಮೊಸಳೆ ಹೊಸಳ್ಳಿ ಯಲ್ಲಿ ಇಂಜಿನಿಯರಿಂಗ್ ಕಾಲೇಜು ತೆರೆಯಲೇ ಬೇಕು ಎಂಬ ಹಟ ಮಾಡಿ ಬಡವರ ಮಕ್ಕಳಿಗೆ ಕೇವಲ 5 ಸಾವಿರ ಶುಲ್ಕ ದೊಂದಿಗೆ ಕಾಲೇಜು ಆರಂಭಿಸಿದ್ದಾರೆ. ಜೊತೆಗೆ ರೇವಣ್ಣ ಪದವೀಧರ ಅಲ್ಲ ಕೇವಲ 10ನೇ ತರಗತಿ ಓದಿದರು ಅಭಿವೃದ್ದಿ ಕಾರ್ಯಗಳಿಗೆ ರೇವಣ್ಣ ನಿಗೆ ಯಾರು ಸರಿ ಸಾಟಿ ಇಲ್ಲ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಈ ಭಾರಿಯ ಚುನಾವಣೆ ದೇಶದ ಚುನಾವಣೆಯು ಹೌದು ಹಾಗೂ ರೇವಣ್ಣ ಅವರ ಗೌರವದ ಚುನಾವಣೆಯು ಹೌದು ಎರಡನ್ನೂ ಉಳಿಸುವ ಸಲುವಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಮುಂದಾಗಬೇಕು ಎಂದು ಕರೆ ನೀಡಿದರು.
ಇಂದು ಕಣ್ಣೀರು ಹಾಕಿ ಸೆರಗು ಒಡ್ಡಿ ಮತಬಿಕ್ಷೆ ಬೇಡುವ ಜನ ಸಿಗರನಹಳ್ಳಿ ದೇವಾಲಯದ ವಿಚಾರವಾಗಿ ನಡೆದ ಗಲಾಟೆ ವೇಳೆ ಮಹಿಳೆಯರ ಹಾಗೂ ಮುಖಂಡರ ಮೇಲೆ ಹಲ್ಲೆ ಹಾಗೂ ಬಂಧನ ಅದಾಗ ಎಲ್ಲಿ ಹೋಗಿದ್ದರು ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹಾಗೂ ಅವರ ತಾಯಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು, ಬಡವರ, ರೈತರಿಗೆ ಮಾರಕವಾದ ಆಡಳಿತ ನಡೆಸುವ ಮೂಲಕ ರೈತರ ಪಂಪ್ ಸೆಟ್ ಗೆ ವಿದ್ಯುತ್ ಟಿಸಿ ಗಳಿಗೆ ಕೂಡ ಹಣ ಕಟ್ಟಿಸಿಕೊಂಡು ರೈತರಿಗೆ ಅನ್ಯಾಯ ಮಾಡಿದೆ, ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು ಹಾಸನ ಜಿಲ್ಲೆಯಲ್ಲೇ ಬರಗಾಲ ಬಂದು ಸಾಯುತ್ತಿರುವ ವೇಳೆ ಪೊಲೀಸ್ ಭದ್ರತೆ ಮೇಲೆ ತುಮಕೂರು ಜಿಲ್ಲೆಗೆ ನೀರು ಬಿಡುವ ಕೆಲಸ ಮಾಡಿದ್ದಾರೆ ಇದಕ್ಕೆಲ್ಲ ಈ ಭಾರಿ ಚುನಾವಣೆಯಲ್ಲಿ ಉತ್ತರ ನೀಡಬೇಕು ಎಂದರು.