ಹೊಸದಿಗಂತ ವರದಿ,ಮೈಸೂರು:
ಲೋಕಸಭೆ ಚುನಾವಣೆಯಲ್ಲಿ ೪೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು. ಆ ಮೂಲಕ ಭವ್ಯ ಭಾರತ ನಿರ್ಮಾಣ ಮಾಡುವ ಕನಸನ್ನು ಈಡೇರಿಸುವ ಜವಾಬ್ದಾರಿ ಮತದಾರರ ಮೇಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಭಾನುವಾರ ನಗರದ ಮಹಾರಾಜ ಕಾಲೇಜ್ ಮೈದಾನದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿಶ್ವಮಾನ್ಯ ನಾಯಕ. ಜಗತ್ತಿನಲ್ಲಿ ಭಾರತವನ್ನು ಮೂರನೇ ಆರ್ಥಿಕ ರಾಷ್ಟçವನ್ನಾಗಿ ಮಾಡಲು ಸಂಕಲ್ಪ ತೊಟ್ಟಿರುವುದಕ್ಕೆ ನಾವು ಬೆಂಬಲಿಸಬೇಕಿದೆ. ದೇಶದ ಅಭಿವೃದ್ಧಿ ಕೆಲಸಗಳನ್ನು ಮೋದಿಯವರು ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ದೇಶದ ಮುಂದಿನ ಭವಿಷ್ಯದ ಬಗ್ಗೆ ದೂರ ದೃಷ್ಠಿಯೇ ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಂದಿನ ೨೫ ವರ್ಷಗಳಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದಿರಬೇಕು ಎಂಬ ವಿಷನ್ ಇದೆ ಎಂದರು.
ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದರೂ ನನಗೆ ಬೆಂಬಲ ನೀಡಿದರು. ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವುದಕ್ಕೆ ಸಂತೋಷವಾಗಿದೆ. ಮೋದಿ ಜಾರಿಗೆ ತಂದ ಕೊಡುಗೆಗಳ ಬಗ್ಗೆ ಮಾತನಾಡಲು ಗಂಟೆಗಟ್ಟಲೆ ಬೇಕು.ಆದರೆ, ಮೋದಿ ಅಂತಹ ಮಹಾನ್ ನಾಯಕರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಳೆದ ಹತ್ತು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.ಕೊಟ್ಟ ಮಾತಿನಂತೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು. ೨೦೧೪ ಮತ್ತು ೨೦೧೯ರ ಚುನಾವಣೆಯಲ್ಲಿ ನನ್ನ ಕೈ ಹಿಡಿದಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆಂದು ನೇರವಾಗಿ ಹೇಳುತ್ತೇನೆ. ಅದೇ ರೀತಿ ಈಗಲೂ ಯದುವೀರ್ ಅವರನ್ನು ಗೆಲ್ಲಿಸಬೇಕು. ಮೂರನೇ ಬಾರಿಗೆ ಮೋದಿಪ್ರಧಾನಿಯಾಗಿ,ಎಚ್.ಡಿ.ಕುಮಾರಸ್ವಾಮಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಂತೆ ಮಾಡಲು ಗೆಲ್ಲಿಸಿ ಕಳುಹಿಸಬೇಕು ಎಂದು ಹೇಳಿದರು. ಚಾಮುಂಡೇಶ್ವರಿದೇವಿಗೆ ಹೋಗಿ ನಾವು ಕೈ ಮುಗಿಯುತ್ತೇವೆ.ಆದರೆ,ಕೆಲವರು ಮಹಿಷಾಸುರ ದಸರಾ ಮಾಡಲು ಮುಂದಾಗಿದ್ದಾಗ ವಿರೋಧ ಮಾಡಿದ್ದೇನೆ. ಇದರಿಂದ ವಿರೋಧಕಟ್ಟಿಕೊಂಡರೂ ಚಾಮುಂಡೇಶ್ವರಿಗೆ ಅಪಮಾನವಾದರೂ ಸಹಿಸಿಕೊಂಡು ಕೂರುವುದಿಲ್ಲ ಎಂದು ಹೇಳಿದರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ರೈಲು ನಿಲ್ದಾಣ, ದಶಪಥ ರಸ್ತೆ ಸೇರಿದಂತೆ ಅನೇಕ ಯೋಜನೆಗಳನ್ನು ಮಾಡಲಾಯಿತು. ರಿಂಗ್ ರಸ್ತೆಯನ್ನು ಎನ್‌ಎಚ್‌ಗೆ ಸೇರಿಸಿ ಅನುಕೂಲ ಮಾಡಲಾಯಿತು. ಜಲಜೀವನ್ ಮಿಷನ್‌ನಡಿ ಜಿಲ್ಲೆಯ ಪ್ರತಿ ಹಳ್ಳಿಗಳಿಗೂ ನೀರು ಕೊಡಿಸುವ ಕೆಲಸ ಮಾಡಲಾಗಿದೆ ಎಂದು ನುಡಿದರು.