ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಜೊತೆ ಸಂವಾದ ನಡೆಸಲು ಬಿಜೆಪಿ ಯುವ ಮೋರ್ಚಾ ಘಟಕದ ರಾಷ್ಟ್ರೀಯ ಅಪಾಧ್ಯಕ್ಷ ಅಭಿನವ್ ಪ್ರಕಾಶ್ (Abhinav Prakash) ಹೆಸರನ್ನು ಬಿಜೆಪಿ ಸೂಚಿಸಿದೆ.
ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಾಧೀಶ ಮದನ್ ಬಿ. ಲೋಕುರ್, ದೆಹಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಎ.ಪಿ. ಶಾಹ್ ಹಾಗೂ ಹಿರಿಯ ಪತ್ರಕರ್ತ ಎನ್. ರಾಮ್ ಅವರು ಹಾಲಿ ಲೋಕಸಭಾ ಚುನಾವಣೆ ಕುರಿತು ಬಹಿರಂಗ ಚರ್ಚೆಗೆ ಪ್ರಧಾನಿ ನರೇಂದ್ರ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದರು.
ಇದರ ಬೆನ್ನಲ್ಲಿಯೇ ಪ್ರಧಾನಿ ಜೊತೆ ಚರ್ಚೆಗೆ ಇಳಿಯಲು ರಾಹುಲ್ ಗಾಂಧಿ ಇಂಡಿಯಾ ಮೈತ್ರಿಯ ಪ್ರಧಾನಿ ಅಭ್ಯರ್ಥಿಯೇ? ಎಂದು ಪ್ರಶ್ನೆ ಮಾಡಿತ್ತು.
ಈಗ ರಾಹುಲ್ ಗಾಂಧಿಯ ಬಹಿರಂಗ ಚರ್ಚೆಯ ಸವಾಲನ್ನು ಸ್ವೀಕಾರ ಮಾಡಿರುವ ಬಿಜೆಪಿ, ಭಾರತೀಯ ಜನತಾ ಯುವ ಮೋರ್ಚಾ ಉಪಾಧ್ಯಕ್ಷ ಅಭಿನಾ ಪ್ರಕಾಶ್‌ರನ್ನು ರಾಹುಲ್ ಗಾಂಧಿ ವಿರುದ್ಧ ಬಹಿರಂಗ ಚರ್ಚೆಗೆ ನೇಮಿಸಿದೆ. ಬಿಜೆವೈಎಂ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಈ ಕುರಿತಾದ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
‘ರಾಹುಲ್ ಗಾಂಧಿ ಅವರೇ, BJYM ನಮ್ಮ ಉಪಾಧ್ಯಕ್ಷ ಅಭಿನಾ ಪ್ರಕಾಶ್ ಅವರನ್ನು ನಿಮ್ಮೊಂದಿಗೆ ಚರ್ಚೆಗಾಗಿ ನಿಯೋಜನೆ ಮಾಡಿದೆ. ಅವರು ರಾಯ್ ಬರೇಲಿಯಲ್ಲಿ ಸುಮಾರು 30% ರಷ್ಟಿರುವ ಪಾಸಿ (SC) ಸಮುದಾಯದ ಯುವ ಮತ್ತು ವಿದ್ಯಾವಂತ ನಾಯಕರಾಗಿದ್ದಾರೆ. ಇದು ರಾಜಕೀಯ ಕುಡಿ ಮತ್ತು ಕಠಿಣ ದಾರಿಯಲ್ಲಿ ಬಂದ ಸಾಮಾನ್ಯ ಯುವಕನ ನಡುವಿನ ಸಮೃದ್ಧ ಚರ್ಚೆಯಾಗಿದೆ. ಚರ್ಚೆಯನ್ನು ಎದುರು ನೋಡುತ್ತಿದ್ದೇನೆ’ ಎಂದು ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ನಿಬಿಡ ವೇಳಾಪಟ್ಟಿಯ ನಡುವೆಯೂ, ಸರ್ಕಾರ ಎದುರು ಇರುವ ಸಂಗತಿಗಳ ಬಗ್ಗೆ ಬಹಿರಂಗ ಚರ್ಚೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದನ್ನು ನೋಡು ಖುಷಿಯಾಗಿದೆ. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಯುವ ಘಟಕವಾಗಿರುವ ನಾವು ಪಕ್ಷದ ದೃಷ್ಟಿ ಹಾಗೂ ಗುರಿಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ಇದಕ್ಕಾಗಿ ಭಾರತೀಯ ಜನತಾ ಯುವ ಮೋರ್ಚಾದ ಉಪಾಧ್ಯಕ್ಷ ಅಭಿನಾ ಪ್ರಕಾಶ್ ಅವರನ್ನು ನಿಮ್ಮ ವಿರುದ್ಧದ ಚರ್ಚೆಗೆ ನೇಮಿಸಲು ನಮಗೆ ಖುಷಿ ಆಗುತ್ತಿದೆ. ಈತ ಉತ್ತರ ಪಪ್ರದೇಶ ಮೂಲದವರು. ನೀವು ಈ ಹಿಂದೆ ಪ್ರತಿನಿಧಿಸಿದ್ದ ಸಂಸತ್ ಕ್ಷೇತ್ರ ಇರುವ ರಾಜ್ಯ. ಅದಲ್ಲದೆ, ಇವರು ದಲಿತ ಪಾಸಿ ಸಮುದಾಯದ ವ್ಯಕ್ತಿ. ನೀವು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಈ ಸಮುದಾಯದದವರು ಶೇ. 30ರಷ್ಟು ಇದ್ದಾರೆ. ಇದೇ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ನಿಮ್ಮ ಕುಟುಂಬದ ವ್ಯಕ್ತಿಗಳು ಸ್ಪರ್ಧೆ ಮಾಡುತ್ತಿದ್ದು, ಇದೇ ಕ್ಷೇತ್ರದಲ್ಲಿ ಈ ಬಾರಿ ನೀವು ಸ್ಪರ್ಧೆ ಮಾಡುತ್ತಿದ್ದೀರಿ.
ನಮ್ಮ ಯುವ ಘಟಕದ ಪ್ರಮುಖ ನಾಯಕ ಮಾತ್ರವಲ್ಲ. ಕೇಂದ್ರ ಸರ್ಕಾರ ಜಾರಿ ಮಾಡಿರುವ ನೀತಿಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡುವ ವಕ್ತಾರರು ಆಗಿದ್ದಾರೆ. ಜವಾಹರಲಾಲ್ ನೆಹರು ವಿವಿಯ ಮಾಜಿ ವಿದ್ಯಾರ್ಥಿ ಹಾಗೂ ದೆಹಲಿ ವಿವಿಯ ರಾಮಜಾಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಆಗಿದ್ದಾರೆ. ಇದಕ್ಕೂ ಮುನ್ನ ಎಸ್‌ಆರ್‌ಸಿಸಿಯಲ್ಲೂ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಡೈನಾಮಿಕ್ಸ್‌ಗಳನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಇವರನ್ನೇ ನಿಮ್ಮ ವಿರುದ್ಧದ ಬಹಿರಂಗ ಚರ್ಚೆಗೆ ನೇಮಕ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯದ ಬಳಿಕ ದಶಕಗಳ ಕಾಲ ದೇಶವನ್ನು ಆಳಿದ ರಾಜಕೀಯ ಕುಟುಂಬದ ಕುಡಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಹೊಸ ಭಾರತದ ಸಾಮಾನ್ಯ ವ್ಯಕ್ತಿಯ ನಡುವಿನ ಚರ್ಚೆಗೆ ನಾವು ಎದುರು ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.