ಹೊಸದಿಗಂತ ಡಿಜಿಟಲ್ ಡೆಸ್ಕ್:
ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸೀತಾ ಪಯಣ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದ ಕುರಿತು ಹೊಸ ಮಾಹಿತಿ ಹೊರಬಿದ್ದಿದ್ದು, ಸಂಕ್ರಾಂತಿ ಹಬ್ಬದ ದಿನವೇ ವಿಶೇಷ ಅಪ್‌ಡೇಟ್ ರಿವೀಲ್ ಆಗಲಿದೆ. ಅದರಲ್ಲಿ ಪ್ರಮುಖವಾಗಿ ಚಿತ್ರದ ಮೂರನೇ ಹಾಡು ಬಿಡುಗಡೆಗೆ ಸಿದ್ಧವಾಗಿದೆ ಎಂಬುದು ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ.
ಅರ್ಜುನ್ ಸರ್ಜಾ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ರೂಬೆನ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಇದೀಗ ಮೂರನೇ ಹಾಡು ‘ಬಸವಣ್ಣ’ ಜನರ ಮುಂದೆ ಬರಲು ಸಜ್ಜಾಗಿದೆ. ಈ ಗೀತೆಯಲ್ಲಿ ಧ್ರುವ ಸರ್ಜಾ ‘ಪವನ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಖದರ್ ಮತ್ತು ಎನರ್ಜಿ ಈ ಹಾಡಿನ ವಿಶೇಷವಾಗಲಿದೆ ಎನ್ನಲಾಗುತ್ತಿದೆ.
ಚಿತ್ರತಂಡದ ಮಾಹಿತಿಯಂತೆ, ‘ಬಸವಣ್ಣ’ ಹಾಡು ಸಂಕ್ರಾಂತಿ ದಿನವಾದ ಜನವರಿ 14ರಂದು ಸಂಜೆ 4.05ಕ್ಕೆ ರಿಲೀಸ್ ಆಗಲಿದೆ. ಈ ಕುರಿತು ಧ್ರುವ ಸರ್ಜಾ ಕಾಣಿಸಿಕೊಂಡಿರುವ ವಿಶೇಷ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಚಿತ್ರದ ಮೊದಲ ಹಾಡು ಜುಲೈನಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿದ್ದರೆ, ಜನವರಿ 6ರಂದು ಬಂದ ಎರಡನೇ ಹಾಡು ಕೂಡ ಜನಪ್ರಿಯವಾಗಿದೆ.
ಸೀತಾ ಪಯಣ ಸಿನಿಮಾ ಫೆಬ್ರವರಿ 14ರಂದು, ಪ್ರೇಮಿಗಳ ದಿನದಂದು ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಐಶ್ವರ್ಯ ಅರ್ಜುನ್ ಸರ್ಜಾ ನಾಯಕಿಯಾಗಿ ಅಭಿನಯಿಸಿದ್ದು, ನಿರಂಜನ್ ಸುಧೀಂದ್ರ ಪ್ರಮುಖ ಪಾತ್ರದಲ್ಲಿದ್ದಾರೆ. ಧ್ರುವ ಸರ್ಜಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತೆಲುಗು ನಟ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸುವುದು ಚಿತ್ರದ ಮತ್ತೊಂದು ಆಕರ್ಷಣೆಯಾಗಿದೆ.


