ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು 46 ವರ್ಷಗಳ ಬಳಿಕ ನಾಳೆ (ಭಾನುವಾರ) ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ.
‘ಭಾನುವಾರ ರತ್ನ ಭಂಡಾರವನ್ನು ಮತ್ತೆ ತೆರೆಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಶ್ರೀ ಜಗನ್ನಾಥ ದೇಗುಲ ಕಾಯ್ದೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಕಟ್ಟುನಿಟ್ಟಾಗಿ ಪಾಲಿಸಲಾಗುವುದು’ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 16 ಮಂದಿ ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಜುಲೈ 14ರಂದು ರತ್ನ ಭಂಡಾರವನ್ನು ಮತ್ತೆ ತೆರೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸಂಪ್ರದಾಯದಂತೆ, ಮೊದಲಿಗೆ ಲೋಕನಾಥ ದೇವರಿಗೆ ಪೂಜೆ ಸಲ್ಲಿಸಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ, ಅಧಿಕೃತ ವ್ಯಕ್ತಿಗಳ ಜೊತೆಗೆ ಹಾವು ಹಿಡಿಯುವ ನಿಪುಣರು ಮೊದಲಿಗೆ ಒಳಗಡೆ ಪ್ರವೇಶಿಸಲಿದ್ದಾರೆ ಎಂದು ವಿಶೇಷ ಸಮಿತಿಯ ಸದಸ್ಯ ಸೌಮೇಂದ್ರ ಮುದುಲಿ ತಿಳಿಸಿದ್ದಾರೆ.
ದೀರ್ಘಕಾಲದಿಂದ ಮುಚ್ಚಿದ್ದರಿಂದ, ಕೇವಲ ರಿಪೇರಿ ಮಾಡುವ ಉದ್ದೇಶಕ್ಕಾಗಿ ಮಾತ್ರ ತೆರೆಯಲಾಗುತ್ತಿದೆ ಎಂದು ಭಗವಾನ್ ಬಲಭದ್ರನ ಮುಖ್ಯ ಸೇವಕ ಹಾಲಧರ್ ದಸ್‌ಮೊಹಾಪಾತ್ರ ಸ್ಪಷ್ಟಪಡಿಸಿದ್ದಾರೆ. ಆಭರಣಗಳನ್ನು ತೂಕ ಮಾಡುವ ಬದಲಾಗಿ ಅವುಗಳನ್ನು ಲೆಕ್ಕಹಾಕಿ ಮತ್ತೆ ಸೀಲ್ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಭಂಡಾರವನ್ನು 1978ರಲ್ಲಿ ಕೊನೆಯ ಬಾರಿ ತೆರೆಯಲಾಗಿತ್ತು.