ಹೊಸದಿಗಂತ ಡಿಜಿಟಲ್ ಡೆಸ್ಕ್:
2022-2024ರ ನಡುವಿನ ಅವಧಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್) ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಪರಿಹಾರದ ಹಣ ನೀಡಲಾಗಿದೆ ಎಂದು ಬುಧವಾರ ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
2022-24ರ ಅವಧಿಯಲ್ಲಿ ಕೇಂದ್ರದ ಉನ್ನತ ಮಟ್ಟದ ಸಮಿತಿಯು ನೆರೆ ಮತ್ತು ಭೂ ಕುಸಿತ ಸಂಬಂಧಿಸಿದ ಪರಿಹಾರ ಒದಗಿಸಲು ಕರ್ನಾಟಕ ಅತ್ಯಧಿಕ 941 ಕೋಟಿ ರೂ., ಹಿಮಾಚಲ ಪ್ರದೇಶ ಮತ್ತು ಅಸ್ಸಾಂಗೆ ಕ್ರಮವಾಗಿ 873 ಕೋಟಿ ರೂಪಾಯಿ ಮತ್ತು 594 ಕೋಟಿ ರೂಪಾಯಿಗಳನ್ನು ಒದಗಿಸಲು ಅನುಮೋದಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ಎನ್‌ಡಿಆರ್‌ಎಫ್‌ನಿಂದ ಕರ್ನಾಟಕಕ್ಕೆ 939 ಕೋಟಿ, ಹಿಮಾಚಲ ಪ್ರದೇಶಕ್ಕೆ 812 ಕೋಟಿ ಮತ್ತು ಅಸ್ಸಾಂಗೆ 160 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ತಮಿಳುನಾಡಿಗೆ 276 ಕೋಟಿ ರೂ., ಸಿಕ್ಕಿಂಗೆ 267 ಕೋಟಿ ರೂ., ನಾಗಾಲ್ಯಾಂಡ್‌ಗೆ 68 ಕೋಟಿ ರೂ. ಪರಿಹಾರ ಮತ್ತು ಭೂ ಕುಸಿತ ನಿರ್ವಹಣೆಗಾಗಿ ನೀಡಲಾಗಿದೆ ಎಂದು ತಿಳಿಸಿದರು.
2024-25ರ ಅವಧಿಯಲ್ಲಿ ಮಿಜೋರಾಂ ಮತ್ತು ಮಣಿಪುರದಲ್ಲಿ ರೆಮಲ್ ಚಂಡಮಾರುತದ ಪರಿಣಾಮ ಮತ್ತು ಕೇರಳ ಭೂಕುಸಿತ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ನೀಡಲು ಕೇಂದ್ರ ತಂಡ ರಚಿಸಲಾಗಿದೆ ಎಂದು ಸಚಿವರು ಹೇಳಿದರು.
ಮಿಜೋರಾಂ ಮತ್ತು ಮಣಿಪುರ ರಾಜ್ಯಗಳು ಎನ್‌ಡಿಆರ್‌ಎಫ್‌ನಿಂದ ಹೆಚ್ಚುವರಿ ಆರ್ಥಿಕ ಸಹಾಯಕ್ಕಾಗಿ ಕ್ರಮವಾಗಿ 216.73 ಕೋಟಿ ಮತ್ತು 711.43 ಕೋಟಿಗೆ ಮೆಮೊರಾಂಡಮ್‌ಗಳನ್ನು ಸಲ್ಲಿಸಿವೆ.