ಹೊಸದಿಗಂತ ವರದಿ, ಮಂಗಳೂರು:
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಸಂಭವಿಸಿದ್ದ ಭೂಕುಸಿದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಗುರುವಾರದಿಂದ ರೈಲು ಸಂಚಾರ ಪುನರಾರಂಭಗೊಂಡಿದೆ.
ರೈಲ್ವೇ ಅಧಿಕಾರಿಗಳು, ಅಭಿಯಂತರರು ಹಲವಾರು ಭಾರಿ ಪರಶೀಲಿಸಿದ ಬಳಿಕ ಹಳಿ ಫಿಟ್ ಎಂದು ಸರ್ಟಿಫಿಕೇಟ್ ನೀಡಿದರು. ಬಳಿಕ ಪ್ರಯಾಣಿಕ ರೈಲು ಸಂಚಾರ ಕ್ಕೆ ಗ್ರೀನ್ ಸಿಗ್ನಲ್ ದೊರಕಿತು.
ಜು.೨೬ರಂದು ರಾತ್ರಿ ರೈಲು ಮಾರ್ಗದ ದೋಣಿಗಲ್ ಎಂಬಲ್ಲಿ ಭೂ ಕುಸಿತ ಸಂಭಸಿದ ಹಿನ್ನಲೆಯಲ್ಲಿ ತಕ್ಷಣದಿಂದಲೇ ಮಂಗಳೂರು-ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಿ ರೈಲು ಮಾರ್ಗದ ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಸುರಿಯುತ್ತಿರುವ ಬಾರೀ ಮಳೆ, ಹವಾಮಾನ ವೈಪ್ಯರಿತ್ಯದ ನಡುವೆಯೂ ಸವಾಲಿನಿಂದ ರೈಲು ಮಾರ್ಗದ ದುರಸ್ತಿಯನ್ನು ಮುಂದುವರಿಸಲಾಗಿತ್ತು.
ಆ.೪ರಂದು ರೈಲು ಮಾರ್ಗದ ದುರಸ್ತಿ ಕಾರ್ಯ ನಡೆಸಿ ಪರಿಶೀಲಸಿ ಗೂಡ್ಸ್ ರೈಲಿನ ಪ್ರಾಯೋಗಿಕ ಓಡಾಟ ನಡೆಸಲಾಗಿತ್ತು. ಆ.೬ರಂದು ಲೋಡೆಡ್ ಗೂಡ್ಸ್ ರೈಲು ಓಡಾಟ ನಡೆಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮಕ್ಕೆ ಗಂಟೆಗೆ ೧೫ ಕಿ.ಮೀ. ವೇಗದ ನಿರ್ಬಂಧ ವಿಧಿಸಲಾಗಿತ್ತು.
ಪ್ರಯಾಣಿಕ ರೈಲು ಸಂಚಾರ
ರೈಲು ಮಾರ್ಗದ ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಬಳಿಕ ಗುರುವಾರ ಮೊದಲ ಪ್ರಯಾಣಿಕ ರೈಲು ಸಂಖ್ಯೆ ೧೬೫೭೫ ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್ಪ್ರೆಸ್ ಅನ್ನು ಮಧ್ಯಾಹ್ನ ದುರಸ್ತಿ ನಡೆಸಲಾದ ಸ್ಥಳದ ರೈಲು ಮಾರ್ಗದ ಮೂಲಕ ಸಂಚಾರಿಸಲು ಅವಕಾಶ ನೀಡಲಾಗಿತ್ತು. ಈ ರೈಲು ಯಶಸ್ವಿಯಾಗಿ ಸಂಚರಿಸಿದೆ.
ಮುಂದೆ ಈ ಮಾರ್ಗದಲ್ಲಿ ನಿಗದಿತ ಸಮಯದಂತೆ ರೈಲುಗಳು ಸಂಚರಿಸಲಿದೆ. ರೈಲ್ವೇ ಇಲಾಖೆಯ ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಮತ್ತು ಎಜಿಎಂ ಕೆ.ಎಸ್.ಜೈನ್ ಅವರು ಅವರು ದುರಸ್ತಿ ಕಾರ್ಯದಲ್ಲಿನ ತಂಡವನ್ನು ಶ್ಲಾಘಿಸಿದ್ದಾರೆ.