ಹೊಸದಿಗಂತ ವರದಿ,ಚಿತ್ರದುರ್ಗ
ಪತ್ನಿಯ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಐಯುಡಿಪಿ ಲೇಔಟ್ ನಿವಾಸಿ ಮಂಜುನಾಥ (೩೮) ಎಂದು ಗುರುತಿಸಲಾಗಿದೆ.
ಮೆಡಿಕಲ್ ಇಮ್ಯಾಜಿನ್ ಟೆಕ್ನಾಲಜಿ ಅಧ್ಯಯನ ಮಾಡಿ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಸಿ.ಟಿ.ಸ್ಕ್ಯಾನ್ ವಿಭಾಗದಲ್ಲಿ ತಂತ್ರಜ್ಞಾರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ೮ ಗಂಟೆ ವೇಳೆಗೆ ಐಯುಡಿಪಿ ಬಡಾವಣೆಯಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಿಲ್ಲ.
ಕಳೆದ ಎರಡು ವರ್ಷಗಳ ಹಿಂದೆ ಚೇತನ ಎಂಬ ಯುವತಿಯ ಜೊತೆ ವಿವಾಹವಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಚೇತನ ಪತಿಗೆ ಕಿರುಕುಳ ನೀಡುತ್ತಿದ್ದಳು ಎಂದು ಮಂಜುನಾಥ್ ಪೋಷಕರು ಆರೋಪಿಸಿದ್ದಾರೆ.
ಪತ್ನಿ ಚೇತನ ಪತಿ ಮುಂಜುನಾಥ್ ವಿರುದ್ದ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಈ ವಿಷಯ ತಿಳಿದು ಮನೆಯಲ್ಲಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಮಂಜುನಾಥ್ ಸಾವಿಗೆ ಜಿಲ್ಲಾ ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ಹಾಗೂ ಸ್ನೇಹಿತರು ಮುಮ್ಮಲ ಮರುಗಿದ್ದಾರೆ. ಸ್ನೇಹಜೀವಿಯಾಗಿದ್ದ ಮಂಜು, ಸದಾ ಸ್ನೇಹಿತರು, ಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದ. ಪ್ರಾಮಾಣಿಕ ಕೆಲಸಗಾರನಾಗಿದ್ದ ಎಂದು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಕಣ್ಣೀರಾಗಿದ್ದಾರೆ.