ಹೊಸದಿಗಂತ ವರದಿ,ಮಂಗಳೂರು:
ದೆಹಲಿಯಲ್ಲಿ ಆ.15 ರಂದು ನಡೆಯಲಿರುವ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಶಕ್ತಿನಗರ ನಾಲ್ಯಪದವಿನ ಪಿಎಂಶ್ರೀ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪೂರ್ವಿ ಶೆಟ್ಟಿ ಮತ್ತು ಶಿಕ್ಷಕಿ ಶ್ವೇತಾ ಅವರು ಭಾಗವಹಿಸಲಿದ್ದಾರೆ.
ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳ ಪೈಕಿ ಮಂಗಳೂರಿನ ಶಕ್ತಿನಗರ ನಾಲ್ಯಪದವಿನ ಪಿಎಂಶ್ರೀ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಹ್ವಾನ ಬಂದಿದೆ. ಶೈಕ್ಷಣಿಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆಗೂ ನಾಲ್ಯಪದವು ಶಾಲೆ ಪಾತ್ರವಾಗಿದೆ.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಈ ಶಾಲೆಯ ಸಹ ಶಿಕ್ಷಕಿ ಶ್ವೇತಾ ಕೆ. ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರಿಬ್ಬರು ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಪಿಎಂಶ್ರೀ ಯೋಜನೆಯಡಿ ರಾಜ್ಯದೆಲ್ಲೆಡೆ ವಿವಿಧ ಶಾಲೆಗಳನ್ನು ಆಯ್ಕೆ ಮಾಡಲಾಗಿತ್ತು. ಪ್ರಥಮ ಹಂತದಲ್ಲಿ ಆಯ್ಕೆಯಾದ ದ.ಕ. ಜಿಲ್ಲೆಯ 8 ಶಾಲೆಗಳ ಪೈಕಿ ನಾಲ್ಯಪದವು ಶಾಲೆಯೂ ಒಂದು. ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ, ಮಕ್ಕಳಿಗೆ ಯೋಜನೆಯ ಸಂಪೂರ್ಣ ಸೌಲಭ್ಯ ಸಿಗುವಂತೆ ಮಾಡಿ ಈ ಶಾಲೆ ಗಮನ ಸೆಳೆದಿತ್ತು. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರದಿಂದ ಇದೀಗ ದೆಹಲಿಗೆ ಆಹ್ವಾನ ಬಂದಿದೆ.
ದೆಹಲಿಗೆ ತೆರಳಲು ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಸೇರಿದಂತೆ ಶಾಲಾಡಳಿತ ಮಂಡಳಿಯು ಒಮ್ಮತದಿಂದ ಸಹಶಿಕ್ಷಕಿ ಶ್ವೇತಾ ಹಾಗೂ ವಿದ್ಯಾರ್ಥಿನಿ ಪೂರ್ವಿ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ.
ಪೂರ್ವಿ ಶೆಟ್ಟಿ ಶಕ್ತಿನಗರ ಕಾರ್ಮಿಕ ಕಾಲೊನಿ ನಿವಾಸಿ ಉಮೇಶ್ ಶೆಟ್ಟಿ ಹಾಗೂ ಗೀತಾ ಶೆಟ್ಟಿ ದಂಪತಿ ಪುತ್ರಿ.