ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಘೋಷಣೆ ಮಾಡಿದ್ದು, ಇದರ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಪಸ್ವರ ಎತ್ತಿದ್ದಾರೆ.
ಯುಪಿಎಸ್ನಲ್ಲಿ ‘ಯು’ ಎಂದರೆ ಮೋದಿ ಸರ್ಕಾರದ ಯು-ಟರ್ನ್ ಎಂದು ಖರ್ಗೆ ವ್ಯಂಗ್ಯ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ಪ್ರತಿಪಕ್ಷಗಳ ಪುನಶ್ಚೇತನದಿಂದಾಗಿ ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಪ್ರಮುಖ ನಿರ್ಧಾರಗಳಿಂದ ಹಿಂದೆ ಸರಿಯಲು ಪ್ರಾರಂಭಿಸಿದೆ. ಜೂನ್ 4ರ ನಂತರ ಪ್ರಧಾನಿಯವರ ಅಧಿಕಾರದ ದುರಹಂಕಾರದ ಎದುರು ಜನರ ಮೇಲುಗೈ ಸಾಧಿಸಿದೆ.
ದೀರ್ಘಾವಧಿಯ ಬಂಡವಾಳ ಲಾಭ/ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಹಿಂತೆಗೆದುಕೊಳ್ಳುವುದು, ಜಂಟಿ ಸಂಸದೀಯ ಸಮಿತಿಗೆ ವಕ್ಫ್ ಮಸೂದೆಯನ್ನು ಕಳುಹಿಸುವುದು, ಕರಡು ಪ್ರಸಾರ ಮಸೂದೆಯನ್ನು ಹಿಂಪಡೆಯುವುದು ಮತ್ತು ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಪ್ರವೇಶವನ್ನು ಕೊನೆಗೊಳಿಸುವುದು ಹೀಗೆ ನರೇಂದ್ರ ಮೋದಿ ಸರ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳನ್ನು ಖರ್ಗೆ ಪ್ರಸ್ತಾಪಿಸಿದರು.
ಏಕೀಕೃತ ಪಿಂಚಣಿ ಯೋಜನೆ ಎಂದರೇನು?
ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಖಾತ್ರಿ ಪಿಂಚಣಿ ಭರವಸೆ ನೀಡುವ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಶನಿವಾರ (ಆಗಸ್ಟ್ 24) ಅನುಮೋದನೆ ನೀಡಿತು. ಯುಪಿಎಸ್ ಆಯ್ಕೆ ಮಾಡಿಕೊಳ್ಳುವ ಉದ್ಯೋಗಿಗಳು 25 ವರ್ಷಗಳ ಕನಿಷ್ಠ ಅರ್ಹತಾ ಸೇವೆಗಾಗಿ ನಿವೃತ್ತಿಯ ಮೊದಲು ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇಕಡಾ 50ಕ್ಕೆ ಸಮಾನವಾದ ಪಿಂಚಣಿಗೆ ಅರ್ಹರಾಗಿರುತ್ತಾರೆ. ಈ ಯೋಜನೆಯು ಕನಿಷ್ಟ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ನಂತರ ತಿಂಗಳಿಗೆ ಕನಿಷ್ಠ 10,000 ರೂಪಾಯಿಗಳ ಪಿಂಚಣಿಯನ್ನು ಖಾತರಿಪಡಿಸುತ್ತದೆ.