ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನ ಸಿಕ್ಕಿದೆ. ಪಾಕ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ(ಎಸ್ಸಿಓ) ಸಭೆಯಲ್ಲಿ ಭಾಗವಹಿಸಲು ಆಗಮಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಕಳೆದ ವರ್ಷ ನಡೆದ ಎಸ್ ಸಿಒ ಸಮಾವೇಶದಲ್ಲಿ ಮೋದಿ ಪಾಲ್ಗೊಂಡಿದ್ದು, ಈ ಬಾರಿ ಪಾಕಿಸ್ತಾನದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಅವರು ಹೋಗುತ್ತಾರೋ ಇಲ್ಲವೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಪಾಕಿಸ್ತಾನ ಇತ್ತೀಚೆಗೆ ಮೋದಿ ಅವರನ್ನು ತಮ್ಮ ದೇಶಕ್ಕೆ ಆಹ್ವಾನಿಸಿದ್ದು, ಈ ವರ್ಷ ಪಾಕಿಸ್ತಾನವು ಶಾಂಘೈ ಸಹಕಾರ ಸಂಸ್ಥೆಗೆ ಸಂಬಂಧಿಸಿದಂತೆ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ – ಸಿಎಚ್ಜಿ ಸಭೆಯನ್ನು ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನ ಮನವಿ ಮಾಡಿದೆ.
ಇಸ್ಲಾಮಾಬಾದ್‌ನಲ್ಲಿ ಇದೇ ಅಕ್ಟೋಬರ್‌ನಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ನರೇಂದ್ರ ಮೋದಿ ಮತ್ತು ಇತರ ದೇಶಗಳ ನಾಯಕರನ್ನು ಪಾಕಿಸ್ತಾನ ಆಹ್ವಾನಿಸಿದೆ. ಕಳೆದ ವರ್ಷ ಉಜ್ಬೇಕಿಸ್ತಾನದ ಸಮರ್ಕಂಡ್ ನಗರದಲ್ಲಿ ಈ ಸಮ್ಮೇಳನ ನಡೆದಿತ್ತು. ಆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಲ್ಗೊಂಡಿದ್ದರು.
ಭಾರತ-ಪಾಕಿಸ್ತಾನ ನಡುವೆ ಉತ್ತಮ ಬಾಂಧವ್ಯ ಇಲ್ಲದಿರುವುದರಿಂದ ಪ್ರಧಾನಿ ಮೋದಿ ಅವರು ಇಸ್ಲಾಮಾಬಾದ್ನ ಸಮಾವೇಶದಲ್ಲಿ ಭಾಗವಹಿಸುವುದು ಅನುಮಾನ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.