ಹೊಸದಿಗಂತ ವರದಿ, ಹುಬ್ಬಳ್ಳಿ:
ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣದಿಂದ ರಾಜ್ಯದಲ್ಲಿ ಸಮಸ್ಯೆಗಳನ್ನು ತಾವೇ ಮೈಮೇಲೆ ಎಳೆದುಕೊಳ್ಳುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದ ಘಟಣೆಗಳಿಂದ ಗೊತ್ತಾಗುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸರ್ಕಾರ ವಿರುದ್ಧ ಕಿಡಿಕಾರಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ನಾಗಮಂಗಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘಟನೆಗಳು ನಡೆದಿವೆ. ಎಲ್ಲ ಸಮಾಜದವರು ಹಬ್ಬ ಆಚರಿಸುವುದು ಸಾಮಾನ್ಯ. ಇಲ್ಲಿ ವಿನಾಕಾರಣ ಸವಾಲು ಹಾಕುವುದರಿಂದ ಇಂತಹ ಗಲಭೆಗಳು ನಡೆಯುತ್ತವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದಾಗ ಮಾತ್ರ ಇಂತಹ ಕೃತ್ಯಗಳು ಹೆಚ್ಚಾಗುತ್ತವೆ ಎಂದು ಹರಿಹಾಯ್ದರು.
ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಬಿಟ್ಟು, ಮುಂದೆಯಾದರೂ ಎಚ್ಚೆತ್ತುಕೊಳ್ಳಬೇಕು. ಪೊಲೀಸ್ ಇಲಾಖೆಗೆ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಬಿಡಬೇಕು. ಅಂದಾಗ ಪೊಲೀಸರು ಸಮಾಜದಲ್ಲಿ ನಡೆಯುತ್ತಿರುವ ಕೋಮು ಗಲಭೆ ಮಟ್ಟ ಹಾಕುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಕಚೇರಿಯಲ್ಲಿ ಶಿಸ್ತು, ಎಲ್ಲರೂ ಹೊಂದಾಣಿಕೆಯಿಂದ ಬದುಕುವುದನ್ನು ಕಲಿಸುತ್ತಾರೆ. ಆದರೆ ಪೊಲೀಸರು ವಿನಾಕಾರಣ ಸಂಘದ ಕಚೇರಿಗೆ ಹೋಗಿ ಕಾರ್ಯಕರ್ತರ ಬಂಸುವುದು ಖಂಡನೀಯ. ಸಂಘದ ಕಾರ್ಯಕರ್ತರು ಗಲಭೆ ಸೃಷ್ಟಿಸುವ ಕೆಲಸ ಯಾವಗಲೂ ಮಾಡುವುದಿಲ್ಲ. ಅಲ್ಪಸಂಖ್ಯಾತರು ಏನು ಮಾಡುತ್ತಿದ್ದಾರೆ ಎಂಬುವುದು ಸರ್ಕಾರ ಮೊದಲು ಅರಿಯಬೇಕು. ಮುಂದೆಯಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.