ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವರು ವಿಫಲ: ಶಾಸಕ ಟಿ.ಎಸ್.ಶ್ರೀವತ್ಸ

ಹೊಸದಿಗಂತ ವರದಿ, ಮೈಸೂರು

ವಿಪಕ್ಷ ಶಾಸಕರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರಿಯಾದ ಗಮನ ನೀಡುತ್ತಿಲ್ಲ ಎಂದು ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಆರೋಪಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳ ಶಾಸಕ ಕಾರ್ಯಚಟುವಟಿಕೆಗಳ ಬಗ್ಗೆ ಮಾತ್ರ ಗುಪ್ತದಳ ಹೆಚ್ಚಿನ ಗಮನ ಹರಿಸುತ್ತಿದೆಯೇ ವಿನಃ, ವಿದ್ವಂಸಕ ಕೃತ್ಯಗಳನ್ನು ಎಸಗುತ್ತಿರುವ ದೇಶ ದ್ರೋಹಿಗಳ ಚಟುವಟಿಕೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಗೃಹ ಸಚಿವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿದ್ದು, ಕೇವಲ ಉಡಾಫೆಯಿಂದ ನಡೆಯುತ್ತಿರುವ ಗಲಭೆ ಕೃತ್ಯಗಳನ್ನು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇತ್ತೀಚೆಗೆ ನಾಗಮಂಗಲ, ಮಂಗಳೂರಿನಲ್ಲಿ ನಡೆದಿರುವ ಘಟನೆಗಳನ್ನು ನೋಡಿದರೆ ರಾಜ್ಯದಲ್ಲಿ ವಿಚಿತ್ರವಾದ ಕಾನೂನುಗಳು ಪರೋಕ್ಷವಾಗಿ ಜಾರಿಗೆ ಬರುತ್ತಿವೆ. ಕೋಮು ಸಾಮರಸ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಮಸೀದಿ ಮುಂದೆ ಗಣಪತಿಯ ಮೆರವಣಿಗೆ ಬರಬಾರದು ಎನ್ನುತ್ತಾರೆ. ನಾವು ಮೆರವಣಿಗೆ ಮಾಡುತ್ತೇವೆ, ತಡೆಯಿರಿ ಎಂದು ಫೇಸ್ ಬುಕ್‌ನಲ್ಲಿ ಸವಾಲು ಹಾಕುತ್ತಾರೆ. ಇದೆಂತಹ ಸಾಮರಸ್ಯ ಎಂದು ಖಾರವಾಗಿ ಪ್ರಶ್ನಿಸಿದರು.

ಈದ್ ಮಿಲಾದ್‌ದಂದು ಅವರು ಮೆರವಣಿಗೆ ಮಾಡುವುದಕ್ಕೆ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸುವುದಿಲ್ಲ, ಆದರೆ ಅದೇ ಹಿಂದೂಗಳು ಗಣಪತಿಯ ಮೆರವಣಿಗೆ ಮಾಡಲು ಮುಸ್ಲಿಮರು ಯಾಕೇ ಅಡ್ಡಿಪಡಿಸಬೇಕು. ಪೊಲೀಸರು ಮೊದಲು ಕೋಮು ಸೌಹಾರ್ಧ ಕಾಪಾಡಲು ಹೆಚ್ಚಿನ ಗಮನ ನೀಡಬೇಕು ಎಂದು ಒತ್ತಾಯಿಸಿದರು.

ಪಿಎಫ್‌ಐ ಸಂಘಟನೆಯವರು ರಾಜ್ಯದಲ್ಲಿ ಹಿಂದೂ ಮುಖಂಡರನ್ನು ಕೊಲೆ ಮಾಡುತ್ತಿದ್ದಾರೆ. ದೇಶದ ಸಾಮರಸ್ಯ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಕಾರ್ಯಕ್ಕೆಂದು ಅವರಿಗೆ ಕೇರಳದಲ್ಲಿ ತರಬೇತಿ ನೀಡಲಾಗುತ್ತಿದೆ. ಮೈಸೂರಿನಲ್ಲಿ ೭ ಮಂದಿ ಬಾಂಗ್ಲಾದವರು ಅನಧಿಕೃತವಾಗಿ ಪ್ರವಾಸ ಮಾಡುತ್ತಿದ್ದರು. ಅವರನ್ನು ನಾವು ಹಿಡಿದು ಪೊಲೀಸರಿಗೆ ಕೊಟ್ಟಿದ್ದೇವೆ. ಆದರೆ ಅವರನ್ನು ಪೊಲೀಸರು ಏನು ಮಾಡಿದರು. ಆ ೭ ಮಂದಿ ಏನೇನು ಕೆಲಸ ಮಾಡುತ್ತಿದ್ದರು ಎಂಬುದರ ಕುರಿತು ಇದುವರೆಗೂ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಆರ್.ಆರ್. ನಗರ ಕ್ಷೇತ್ರದ ಶಾಸಕ ಮುನಿರತ್ನ ಬಂಧನ ಪ್ರಕರಣದಲ್ಲಿ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಚೆನ್ನಾರೆಡ್ಡಿಯನ್ನು ಬಂಧಿಸಿದ ಸರ್ಕಾರ, ಮುನಿರತ್ನರನ್ನು ತರಾತುರಿಯಲ್ಲಿ ಬಂಧಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ತಕ್ಷಣವೇ ಬಂಧಿಸದೆ, ಅವರ ಧ್ವನಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿತ್ತು.ಅಲ್ಲಿಂದ ವರದಿ ಬಂದ ಬಳಿಕವೇ ಘೋಷಣೆ ಕೂಗಿದವರನ್ನು ಬಂಧಿಸಿದೆ. ಆದರೆ ಮುನಿರತ್ನರ ಪ್ರಕರಣದಲ್ಲಿ ಈ ರೀತಿ ನಡೆದುಕೊಂಡಿಲ್ಲ, ಅವರ ಧ್ವನಿಯನ್ನು ಎಫ್‌ಎಸ್‌ಎಲ್ ಗೆ ಕಳುಹಿಸಿ, ಅಲ್ಲಿಂದ ವರದಿ ಬರುವ ತನಕ ಕಾಯದೆ, ಕೂಡಲೇ ಮುನಿರತ್ನರನ್ನು ಬಂಧಿಸಿದ್ದಾರೆ ಇದು ಸರ್ಕಾರದ ಇಬ್ಬಂದಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುನಿರತ್ನ ಅವರು ದಲಿತರನ್ನು ನಿಂದಿಸಿದ್ದರೆ, ಅದನ್ನು ನಾವು ಖಂಡಿಸುತ್ತೇವೆ. ಎಂದಿಗೂ ಸಮರ್ಥಿಸಿಕೊಳ್ಳುವುದಿಲ್ಲ ಎಂದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!