ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಟ್ಕಾ, ಪಾನ್ ಮಸಾಲಾ ತಿಂದು ರಸ್ತೆಯಲ್ಲಿ ಉಗುಳುತ್ತಾ ಸ್ವಚ್ಛತೆಯನ್ನೂ ಹಾಳು ಮಾಡುವವರಿಗೆ ಬುದ್ಧಿ ಕಲಿಸಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ಉಪಾಯವೊಂದನ್ನು ನೀಡಿದ್ದಾರೆ.
ನಾಗ್ಪುರದಲ್ಲಿ ನಡೆದ ಸ್ವಚ್ಛ ಭಾರತ್ ಮಿಷನ್‌ನ 10ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಜನರು ತುಂಬಾ ಬುದ್ಧಿವಂತರು. ಚಾಕೊಲೆಟ್ ತಿಂದಾಗ ಅದರ ರ್ಯಾಪರ್ ಅನ್ನು ರಸ್ತೆಗೆ ಎಸೆಯುತ್ತಾರೆ. ಆದರೆ ಅದೇ ಜನ ವಿದೇಶಕ್ಕೆ ಹೋದಾಗ ಚಾಕೊಲೆಟ್ ತಿಂದ ಅದರ ಕವರ್ ಅನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ವಿದೇಶಗಳಲ್ಲಿ ಅದೇ ಜನರು ತಮ್ಮನ್ನು ಸುಸಂಸ್ಕೃತ ಪ್ರಜೆಗಳೆಂದು ತೋರಿಸಿಕೊಳ್ಳುತ್ತಾರೆ. ಆದರೆ ತಮ್ಮ ದೇಶದಲ್ಲಿ ಹೊಲಸು ಹರಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.
ಅಲ್ಲದೆ ನಾನು ಕೂಡ ಮೊದಲು ಹೀಗೆಯೇ ಇದ್ದೆ. ತಿಂದಾಗಲೀ, ಕುಡಿದಾಗಲೀ ರಾಪರ್ ಅಲ್ಲಿ ಇಲ್ಲಿ ಎಸೆಯುತ್ತಿದ್ದೆ. ಆದರೆ ನಾನೀಗ ಬದಲಾಗಿದ್ದೇನೆ, ಚಾಕೊಲೆಟ್ ತಿಂದಾಗ ಜೇಬಿನಲ್ಲಿ ರ್ಯಾಪರ್ ಇಟ್ಟುಕೊಂಡು ಮನೆಗೆ ಹೋದಾಗ ಡಸ್ಟ್ ಬಿನ್ಗೆ ಎಸೆಯುತ್ತೇನೆ ಎಂದು ತಿಳಿಸಿದರು.
ಅದೇ ರೀತಿ ಗುಟ್ಕಾ ಮತ್ತು ಪಾನ್ ಮಸಾಲಾ ತಿನ್ನುವವರು ಹೆಚ್ಚಾಗಿ ರಸ್ತೆಗಳಲ್ಲಿ ಉಗುಳುತ್ತಾರೆ. ಇದರಿಂದ ರಸ್ತೆ ಅಶುದ್ಧವಾಗುವುದಲ್ಲದೆ ಇತರರಿಗೂ ತೊಂದರೆಯಾಗುತ್ತಿದೆ. ಇದಕ್ಕೆ ಒಂದೇ ಒಂದು ಚಿಕಿತ್ಸೆ ಇದೆ. ಗುಟ್ಖಾ, ಪಾನ್ ಮಸಾಲಾ ತಿಂದು ರಸ್ತೆಗೆ ಉಗುಳುವ ವೇಳೆ ಈ ವ್ಯಕ್ತಿಗಳ ಫೋಟೋ ತೆಗೆದು ಮರುದಿನ ಪತ್ರಿಕೆಯಲ್ಲಿ ಪ್ರಕಟಿಸಿಬೇಕು. ಮರ್ಯಾದೆಗೆ ಅಂಜಿ ಇಂತಹ ಕೆಲಸ ಮಾಡುವುದನ್ನು ನಿಲ್ಲಿಸುತ್ತಾರೆ ಎಂದಿದ್ದಾರೆ.