ಹೊಸದಿಗಂತ ಡಿಜಿಟಲ್ ಡೆಸ್ಕ್;
ಮಲಯಾಳ ನಿರ್ಮಾಪಕ, ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಅವರು ನನ್ನನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 31 ವರ್ಷದ ನಟರೊಬ್ಬರು ಬೆಂಗಳೂರು ಈಶಾನ್ಯ ವಿಭಾಗದ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇರಳ ಪೊಲೀಸರು ಪ್ರಕರಣವನ್ನು ಬೆಂಗಳೂರು ಪೊಲೀಸರಿಗೆ ವರ್ಗಾಯಿಸಿದ ನಂತರ ರಂಜಿತ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಕೋಯಿಕ್ಕೋಡ್ ಮೂಲದ ಕಲಾವಿದ ಎಂದು ಗುರುತಿಸಿಕೊಂಡಿರುವ ದೂರುದಾರರು, ‘2012ರಲ್ಲಿ ‘ಬಾವುಟ್ಟಿಯುಡೆ ನಾಮತ್ತಿಲ್’ ಚಿತ್ರದ ಚಿತ್ರೀಕರಣದ ವೇಳೆ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಕೇರಳದ ಈಸ್ಟ್ ಹಿಲ್ಗೆ ಹೋಗಿದ್ದ ಸಂದರ್ಭದಲ್ಲಿ ರಂಜಿತ್ ನನ್ನನ್ನು ಭೇಟಿಯಾಗಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಳಿಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಬಳಿಯ ಐಷಾರಾಮಿ ಹೋಟೆಲ್ಗೆ ನನ್ನನ್ನು ಕರೆಸಿಕೊಂಡಿದ್ದ ರಂಜಿತ್, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು’ ಎಂದು ದೂರುದಾರ ವಿವರಿಸಿದ್ದಾರೆ.