ಹೊಸದಿಗಂತ ಡಿಜಿಟಲ್ ಡೆಸ್ಕ್
ಸಂವಿಧಾನದ 75ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಮಾತನಾಡಿದರು.
ಲೋಕಸಭೆ ಅಧಿವೇಶನದಲ್ಲಿ ಇಂದು ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನವನ್ನು ರಚಿಸಿದವರು ವಿವಿಧತೆಯಲ್ಲಿ ಏಕತೆಯ ಮಹತ್ವವನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಪ್ರತಿಪಾದಿಸಿದರು. ಆದರೆ ಕೆಲವರು ಅದನ್ನು ಆಚರಿಸದಿರಲು ನಿರ್ಧರಿಸಿದರು ಮತ್ತು ಬದಲಿಗೆ ವಿಷದ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರು ಎಂದು ಗುಡುಗಿದರು.
1948 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಭಾರತದ ಪ್ರಯಾಣವು ಅಸಾಧಾರಣವಾಗಿತ್ತು. ಇಂದು ದೇಶವು ಪ್ರಜಾಪ್ರಭುತ್ವದಲ್ಲಿ ಆಳವಾದ ಬೇರುಗಳನ್ನು ಹೊಂದಿದೆ, ಅದು ಜಗತ್ತಿಗೆ ಸ್ಫೂರ್ತಿಯಾಗಿದೆ ಎಂದು ಒತ್ತಿ ಹೇಳಿದರು.
ಸಂವಿಧಾನ ರಚನೆಯಲ್ಲಿ ಬಿಆರ್ ಅಂಬೇಡ್ಕರ್, ಪುರುಷೋತ್ತಮ ದಾಸ್ ಟಂಡನ್ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರಂತಹ ದಿಗ್ಗಜರ ಕೊಡುಗೆಗಳನ್ನು ಪ್ರಧಾನಿ ಸ್ಮರಿಸಿದರು. ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ನೀಡಲು ಹಲವಾರು ದೇಶಗಳು ದಶಕಗಳನ್ನು ತೆಗೆದುಕೊಂಡವು, ಆದರೆ ಭಾರತದ ಸಂವಿಧಾನವು ಅವರಿಗೆ ಮತದಾನದ ಹಕ್ಕನ್ನು ಮೊದಲಿನಿಂದಲೂ ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ನ ಇತಿಹಾಸ ಕೆದಕಿದ ಮೋದಿ
ನಾನು ಯಾರನ್ನೂ ವೈಯಕ್ತಿಕವಾಗಿ ನಿಂದಿಸಲು ಬಂದಿಲ್ಲ. ಆದರೆ, ಸತ್ಯವನ್ನು ರಾಷ್ಟ್ರದ ಮುಂದೆ ಇಡಬೇಕು. 55 ವರ್ಷ ಇದೊಂದು ಕುಟುಂಬ ಭಾರತವನ್ನು ಆಳಿತು. ಇದರಿಂದ ದೇಶದಲ್ಲಿ ಏನೇನಾಯ್ತು ಅನ್ನೋದು ಗೊತ್ತಿರಬೇಕು. ಈ ಕುಟುಂಬದ ನೀತಿ, ನಿಯಮ, ಪರಂಪರೆ ಮುಂದುವರೆಯಿತು. ಎಲ್ಲಾ ಹಂತಗಳಲ್ಲಿ ಈ ಕುಟುಂಬ ಸಂವಿಧಾನವನ್ನು ಹಾಳು ಮಾಡಿತು. 1947-1952 ಈ ದೇಶದಲ್ಲಿ ಚುನಾಯಿತ ಸರ್ಕಾರವೇ ಇರಲಿಲ್ಲ, ಚುನಾವಣೆಗಳು ಇರಲಿಲ್ಲ, ಚುನಾವಣೆ ನಡೆದರೂ ಮತ್ತೆ ಅದೇ ಕುಟುಂಬ ಬರುತ್ತಿತ್ತು. ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡಿದರು. ಸಂವಿಧಾನ ನಿರ್ಮಾತೃರಿಗೆ ಅಪಮಾನ ಮಾಡಿದರು.
ಕಾಂಗ್ರೆಸ್ ಸರ್ಕಾರ 75 ಸಲ ಸಂವಿಧಾನಕ್ಕೆ ಬದಲಾವಣೆ ತಂದಿತು. ನೆಹರೂ ಅವರು ಸಂವಿಧಾನ ಬದಲಾಯಿಸಿ, ತಮ್ಮ ಸ್ವಂತ ಸಂವಿಧಾನ ತರುತ್ತೇನೆ ಅಂತ ಪತ್ರದಲ್ಲಿ ಅಂದಿನ ಮುಖ್ಯಮಂತ್ರಿಗಳಿಗೆ ಬರೆದಿದ್ದರು ಎಂದಿದ್ದರು. ನೆಹರೂ ನಿರ್ಧಾರಕ್ಕೆ ಅಂದಿನ ಹಿರಿಯ ನಾಯಕರೇ ವಿರೋಧಿಸಿದ್ದರು. ಇಂದಿರಾ ಗಾಂಧಿ ಸಂವಿಧಾನಕ್ಕೆ ಬದಲಾವಣೆ ತಂದರು.ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಚುನಾವಣೆಯನ್ನು ನ್ಯಾಯಾಂಗವು “ಅಕ್ರಮ” ಎಂದು ಘೋಷಿಸುವುದನ್ನು ತಪ್ಪಿಸಲು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರು. ಅವರು ಸಂವಿಧಾನದ ತತ್ವಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರಧಾನಿ ಮೋದಿ ಟೀಕಿಸಿದರು.