ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಟಿಮ್ ಸೌಥಿ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಹ್ಯಾಮಿಲ್ಟನ್‌ನಲ್ಲಿ ಇಂದಿನಿಂದ ಆರಂಭವಾಗಿದೆ. ಈ ಪಂದ್ಯದ ಮೂಲಕ ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗಿ ವಿದಾಯ ಹೇಳಲು ಬಯಸಿದ್ದಾರೆ.

ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಟಿಮ್ ಸೌಥಿ ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಇದು ನನ್ನ ಕೊನೆಯ ಟೆಸ್ಟ್ ಸರಣಿ ಎಂದಿದ್ದರು. ಹೀಗಾಗಿ ಆಂಗ್ಲರ ವಿರುದ್ಧದ ಕೊನೆಯ ಟೆಸ್ಟ್ ಟಿಮ್ ಸೌಥಿ ಅವರ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಈ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಟಿಮ್ ಸೌಥಿ ತಮ್ಮ ಕೊನೆಯ ಪಂದ್ಯದಲ್ಲಿ ವಿಂಡೀಸ್​ನ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ದೊಡ್ಡ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್​ರೌಂಡರ್ ಜಾಕ್ವೆಸ್ ಕಾಲಿಸ್ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ.

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 10 ಎಸೆತಗಳನ್ನು ಎದುರಿಸಿದ ಸೌಥಿ 230 ಸ್ಟ್ರೈಕ್ ರೇಟ್‌ನಲ್ಲಿ 23 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್​ನಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಂತಕಥೆ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕಿದಲ್ಲದೆ, ಗೇಲ್ ಅವರನ್ನು ಸಹ ಸರಿಗಟ್ಟಿದರು.

ಟಿಮ್ ಸೌಥಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 98 ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ಮೂಲಕ ಟೆಸ್ಟ್‌ನಲ್ಲಿ 97 ಸಿಕ್ಸರ್‌ಗಳನ್ನು ಸಿಡಿಸಿದ್ದ ಕಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ. ಇದರ ಜೊತೆಗೆ 98 ಸಿಕ್ಸರ್‌ಗಳನ್ನು ಬಾರಿಸಿರುವ ಕ್ರಿಸ್ ಗೇಲ್ ಅವರನ್ನು ಸಹ ಸರಿಗಟ್ಟಿದ್ದಾರೆ.

ಟಿಮ್ ಸೌಥಿಗೆ ಇನ್ನೂ ಒಂದು ಇನ್ನಿಂಗ್ಸ್ ಆಡುವ ಅವಕಾಶವಿದ್ದು, ಅವರು ತಮ್ಮ ಕೊನೆಯ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶವನ್ನು ಪಡೆದರೆ, ಟೆಸ್ಟ್​ನಲ್ಲಿ 100 ಸಿಕ್ಸರ್​ಗಳನ್ನು ಪೂರ್ಣಗೊಳಿಸಬಹುದು. ಇದರೊಂದಿಗೆ ಅವರು ಟೆಸ್ಟ್​ನಲ್ಲಿ ಸಿಕ್ಸರ್​ಗಳ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

ಈ ಪಂದ್ಯದ ಮೊದಲ ದಿನದಂತ್ಯಕ್ಕೆ ನ್ಯೂಜಿಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿದೆ. ನಾಯಕ ಟಾಮ್ ಲ್ಯಾಥಮ್ ಗರಿಷ್ಠ 63 ರನ್ ಗಳಿಸಿದರೆ, ಮಿಚೆಲ್ ಸ್ಯಾಂಟ್ನರ್ 50 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಉಳಿದಂತೆ ತಂಡದ ಪರ ವಿಲ್ ಯಂಗ್ 42 ರನ್ ಮತ್ತು ಕೇನ್ ವಿಲಿಯಮ್ಸನ್ 44 ರನ್ ಗಳಿಸಿದರು. ಇತ್ತ ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ ಮತ್ತು ಗಸ್ ಅಟ್ಕಿನ್ಸನ್ ತಲಾ ಮೂರು ವಿಕೆಟ್ ಪಡೆದರೆ, ಬ್ರೇಡನ್ ಕಾರ್ಸೆ ಎರಡು ವಿಕೆಟ್ ಪಡೆದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!