ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಅನೈತಿಕ ಸಂಬಂಧ ಕುಟುಂಬದವರಿಗೆ ಗೊತ್ತಾದ ಹಿನ್ನೆಲೆಯಲ್ಲಿ ವಿವಾಹಿತರಿಬ್ಬರು ಭಯಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.
ಸೃಷ್ಟಿ (20) ನದಿಗೆ ಹಾರಿ ಸಾವನ್ನಪ್ಪಿದ್ದರೆ, ಬನಹಳ್ಳಿ ಗ್ರಾಮದ ಪ್ರಸನ್ನ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆ ಬೆಳ್ಳೂರು ಗ್ರಾಮದ ಸೃಷ್ಟಿಯನ್ನು ಆತಗೂರು ಹೋಬಳಿ ಯರಗನಹಳ್ಳಿ ಗ್ರಾಮದ ದಿನೇಶ್ ಎಂಬುವರಿಗೆ ಕಳೆದ ಒಂದುವರೆ ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ನಂತರ ದಂಪತಿಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ನಾಲ್ಕೈದು ಬಾರಿ ಜಗಳ ನಡೆದ ಹಿನ್ನೆಲೆಯಲ್ಲಿ ದಿನೇಶನನ್ನು ತೊರೆದ ಸೃಷ್ಟಿ ಬನ್ನಹಳ್ಳಿಯ ಪ್ರಸನ್ನ ಎಂಬುವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಈ ವಿಚಾರಎರಡು ಕುಟುಂಬಗಳಿಗೆ ಗೊತ್ತಾದ ಹಿನ್ನೆಲೆಯಲ್ಲಿ ಸೃಷ್ಟಿ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆಯಾದ ಬಗ್ಗೆ ಗಂಡ ದಿನೇಶ್ ಕೆಸ್ತೂರು ಪೊಲೀಸರಿಗೆ ದೂರು ನೀಡಿದ್ದರು. ತನ್ನ ಹಾಗೂ ಪ್ರಸನ್ನ ನಡುವಿನ ಅನೈತಿಕ ಸಂಬಂಧ ಎರಡು ಕುಟುಂಬಗಳಿಗೆ ಬಹಿರಂಗವಾದ ಕಾರಣ ಭೀತಿಗೊಂಡ ಸೃಷ್ಟಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಶವ ಮದ್ದೂರು ತಾಲೂಕು ವೈದ್ಯನಾಥಪುರ ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.
ಸೃಷ್ಟಿ ಸಾವನ್ನಪ್ಪಿದ ವಿಚಾರ ತಿಳಿಯುತ್ತಲೇ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರಸನ್ನ ಸಹ ಬನ್ನಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಕೊನೆ ಉಸಿರೆಳದಿದ್ದಾನೆ. ಘಟನೆ ಸಂಬಂದ ಮದ್ದೂರು ಪೊಲೀಸರು ಮೃತರ ಎರಡು ಕುಟುಂಬಗಳು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಸೃಷ್ಟಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸನ್ನ ಶವ ಪರೀಕ್ಷೆ ನಂತರ ಇಬ್ಬರ ಶವಗಳನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.