ನಾನು ಯಾರನ್ನು ದೂರುವುದಿಲ್ಲ, ನನ್ನ ಚಾರಿತ್ಯ ಹರಣ ಆಗುತ್ತಿದೆ: ಅಲ್ಲು ಅರ್ಜುನ್ ಬೇಸರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್ ಗೆ ಬಂದಾಗ ನಡೆದ ಕಾಲ್ತುಳಿತ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಅಲ್ಲು ಅರ್ಜುನ್ ಅವರು ಈ ಪ್ರಕರಣದಲ್ಲಿ ಅರೆಸ್ಟ್ ಕೂಡ ಆಗಿದ್ದರು. ಈ ಬಂಧನದ ಹಿಂದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಭಾವ ಇದೆ ಎಂದು ಹೇಳಲಾಗಿತ್ತು.

ಇದಾದ ಬಳಿಕ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಗೆ ಅಲ್ಲು ಅರ್ಜುನ್ ಕಾರಣ ಎಂದು ಆರೋಪಿಸಿರುವ ಸಿಎಂ ರೇವಂತ್ ರೆಡ್ಡಿ, ‘ನಾಯಕ, ನಾಯಕಿಯರಿಗೆ ಥಿಯೇಟರ್ ಗೆ ಬರಬೇಡಿ ಎಂದು ಹೇಳಿದ್ದರೂ ಲೆಕ್ಕಿಸದೆ ಬಂದಿದ್ದಾರೆ. ಸಿನಿಮಾ ಥಿಯೇಟರ್ ಗೆ ಬರುವಾಗ ಕಾರಿನ ಸನ್ ರೂಫ್ ತೆಗೆದು ಅಲ್ಲಿ ರೋಡ್ ಶೋ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಆ ಥಿಯೇಟರ್ ನ ಪ್ರೇಕ್ಷಕರು ಮಾತ್ರವಲ್ಲ.. ಅದೇ ರಸ್ತೆಯಲ್ಲಿದ್ದ ಇತರೆ ಥಿಯೇಟರ್ ಗಳಲ್ಲಿದ್ದ ಪ್ರೇಕ್ಷಕರೂ ಕೂಡ ಸಂಧ್ಯಾ ಥಿಯೇಟರ್ ಗೆ ದೌಡಾಯಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದರು.

ಇಲ್ಲಿ ಯಾರದ್ದೂ ತಪ್ಪಿಲ್ಲ
ಇದೀಗ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಲ್ಲು ಅರ್ಜುನ್, ಇಲ್ಲಿ ಯಾರದ್ದೂ ತಪ್ಪಿಲ್ಲ. ಇದೊಂದು ಅಪಘಾತ. ಎಲ್ಲರೂ ಒಳ್ಳೆಯ ವಿಚಾರಕ್ಕೆ ಸೇರಿದ್ದರು. ಇದು ಅಪಘಾತ ಅಷ್ಟೇ. ಇದು ಯಾರ ನಿಯಂತ್ರಣದಲ್ಲೂ ಇರಲಿಲ್ಲ. ನಾನು ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ರೇವತಿ ಅವರ ಮಗ ಬೇಗ ಚೇತರಿಕೆ ಕಾಣಲಿ ಎಂದು ಕೋರಿಕೊಳ್ಳುತ್ತೇನೆ. ನಾನು ಅವರ ಆರೋಗ್ಯದ ಬಗ್ಗೆ ಅಪ್​ಡೇಟ್ ಪಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಜನರನ್ನು ಮನರಂಜಿಸಬೇಕು ಎಂಬ ಉದ್ದೇಶ ನನ್ನದು. ಥಿಯೇಟರ್ ಎಂಬುದು ದೇವಸ್ಥಾನ ಇದ್ದಹಾಗೆ. ದೇವಸ್ಥಾನದಲ್ಲಿ ಏನಾದರೂ ಆದರೆ, ನನಗಿಂತ ಹೆಚ್ಚು ಇನ್ಯಾರಿಗೆ ಬೇಸರ ಆಗಲು ಸಾಧ್ಯ? 2 ದಶಕಗಳಲ್ಲಿ ಗಳಿಸಿದ ಗೌರವವನ್ನು ಒಂದು ದಿನ ನಾಶ ಆಗುತ್ತದೆ ಎಂದರೆ ಅದು ಸಾಕಷ್ಟು ಬೇಸರ ಉಂಟು ಮಾಡುತ್ತದೆ ಎಂದಿದ್ದಾರೆ ಅಲ್ಲು ಅರ್ಜುನ್.

ಹಲವು ವದಂತಿಗಳು ಹಬ್ಬುತ್ತಿವೆ. ನಾನು ಯಾವ ರಾಜಕಾರಣಿಯನ್ನೂ, ಸರ್ಕಾರವನ್ನೂ ದೂರುವುದಿಲ್ಲ. ಸಾಕಷ್ಟು ವದಂತಿ ಹಬ್ಬಿಸಲಾಗುತ್ತಿದೆ. ನನ್ನ ಚಾರಿತ್ಯ ಹರಣ ಆಗುತ್ತಿದೆ. ನಾನು ಎಲ್ಲಾ ಸೆಲಬ್ರೇಷನ್​ನ ರದ್ದು ಮಾಡಿದ್ದೇನೆ. ಮೂರು ವರ್ಷ ಕಷ್ಟಪಟ್ಟು ಮಾಡಿದ ಸಿನಿಮಾ ಹೇಗಿದೆ ಎಂಬುದನ್ನು ಕೂಡ ನಾನು ನೋಡುತ್ತಿಲ್ಲ. ಮನೆಯಲ್ಲಿ ಒಬ್ಬನೇ ಕೂರುತ್ತಿದ್ದೇನೆ. ನಾನು ಇದಕ್ಕೆ ನೇರ ಕಾರಣ ಅಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ ಎಂದು ಅಲ್ಲು ಅರ್ಜುನ್ ಭಾವುಕರಾದರು.

ತೆಲುಗು ಚಿತ್ರರಂಗವನ್ನು ಮೇಲಕ್ಕೆ ತೆಗೆದುಕೊಂಡು ಹೋಗಬೇಕು ಎಂದುಕೊಂಡವನು ನಾನು. ಮೂರು ವರ್ಷ ಮಾಡಿದ ಕೆಲಸ ಹೇಗಿದೆ ನೋಡಲು ಹೋಗಿದ್ದವನು ನಾನು. ನಾನು ಒಪ್ಪಿಗೆ ಇಲ್ಲದೆ ಹೋಗಿದ್ದೇನೆ ಎಂಬುದೆಲ್ಲ ಸುಳ್ಳು. ಅಲ್ಲಿ ಪೋಲಿಸರು ಇದ್ದರು. ಒಪ್ಪಿಗೆ ಇಲ್ಲ ಎಂದಿದ್ದರೆ ಅವರೇ ಹೇಳುತ್ತಿದ್ದರು. ಹೀಗಾಗಿ, ನಾನು ಒಪ್ಪಿಗೆ ಪಡೆದಿದ್ದೇನೆ ಎಂಬುದು ಸ್ಪಷ್ಟ. ಅಲ್ಲಿ ರೋಡ್​ಶೋ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳು. ಕೈ ಮಾಡಿದರೆ ಫ್ಯಾನ್ಸ್ ಖುಷಿಪಡುತ್ತಾರೆ. ಹಾಗಾಗಿ ನಾನು ಕೈ ಬೀಸಿದೆ. ಎಲ್ಲ ಹೀರೋಗಳು ಅದನ್ನೇ ಮಾಡುತ್ತಾರೆ’ ಎಂದರು ಅಲ್ಲು ಅರ್ಜುನ್.

ಹೊರಗೆ ಸಾಕಷ್ಟು ಜನ ಸೇರುತ್ತಿದ್ದಾರೆ ದಯವಿಟ್ಟು ಹೊರಡಿ ಎಂದು ಪೊಲೀಸರು ಹೇಳಿದರು. ನಾನು ಆ ಕ್ಷಣವೇ ಮನೆಗೆ ನಡೆದೆ. ಮರುದಿನವೇ ಸಾವಿನ ವಿಚಾರ ತಿಳಿಯಿತು. ನನಗೆ ಶಾಕ್ ಆಯಿತು. ನನಗೆ ಆ ವಿಚಾರ ಗೊತ್ತಾಗಿದ್ದರೆ ನಾನು ಸಿನಿಮಾ ನೋಡ್ತಾನೇ ಇರಲಿಲ್ಲ. ನಾನು ನನ್ನ ಆಪ್ತರಿಗೆ ಕರೆ ಮಾಡಿ ಏನೆಂದು ವಿಚಾರಿಸಿಕೊಳ್ಳಿ ಎಂದು ಹೇಳಿದೆ. ಅದೇ ದಿನ ಆಸ್ಪತ್ರೆಗೆ ತೆರಳಲು ನಿರ್ಧರಿಸಿದ್ದೆ. ಆದರೆ, ಬೇಡ ಎಂದರು’ಎಂದು ನಡೆದ ಘಟನೆ ವಿವರಿಸಿದ್ದಾರೆ ಅಲ್ಲು ಅರ್ಜುನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!