ಹೊಸದಿಗಂತ ವರದಿ ಅಂಕೋಲಾ:
ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಕೇರಿಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಔಷಧಿ ವಿಭಾಗದ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಕಾರವಾರದ ವೈಲವಾಡದ ಮೂವರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅವಮಾನಕಾರಿಯಾಗಿ ಮಾತನಾಡಿ ಮೃತರ ವಿಡಿಯೋ ಚಿತ್ರೀಕರಣ ನಡೆಸಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಆರೋಪದ ಮೇಲೆ ಈ ಬಂಧನ ನಡೆದಿದೆ.
ಕಾರವಾರದ ಪಿಕಳೆ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಫಾರ್ಮ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜೀವ ಪಿಕಳೆ(67) ಎನ್ನುವವರು ಡೆತ್ ನೋಟ್ ಬರೆದು ಜನವರಿ 23 ರಂದು ಬೆಳಗಿನ ಜಾವ ತಮ್ಮ ಮನೆಯ ತುಳಸಿ ಕಟ್ಟೆಯ ಎದುರು ಲೈಸನ್ಸ್ ಇರುವ ತಮ್ಮ ಡಬಲ್ ಬಾರಲ್ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೆಲವು ದಿನಗಳ ಹಿಂದೆ ರಾಜೀವ ಪಿಕಳೆ ಅವರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಅವಧಿ ಮುಗಿದ ಔಷಧಿ ನೀಡಿದ್ದಾರೆ ಎಂದು ಕೆಲವರು ಬಂದು ಗಲಾಟೆ ಮಾಡಿದ್ದರು. ವ್ಯಕ್ತಿಯೋರ್ವರು ವಿಡಿಯೋ ಚಿತ್ರೀಕರಣ ನಡೆಸಿ ಔಷಧಿ ನೀಡಿರುವ ರಾಜೀವ ಪಿಕಳೆ ಮತ್ತು ಆಸ್ಪತ್ರೆಯ ಕುರಿತಂತೆ ವಾಗ್ದಾಳಿ ನಡೆಸಿ ಅವಮಾನಕಾರಿ ರೀತಿಯಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಲಾಗಿತ್ತು.
ಈ ಘಟನೆ ನಡೆದ ದಿನದಿಂದ ರಾಜೀವ ಪಿಕಳೆ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರಲ್ಲದೇ ತಮ್ಮ ಗಮನಕ್ಕೆ ಬರದೇ ಅವಧಿ ಮೀರಿದ ಮಾತ್ರೆ ವಿತರಣೆ ಆಗಿರುವ ಕುರಿತು ಕ್ಷಮೆಯನ್ನೂ ಕೋರಿದ್ದರು. ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿರುವುದು ಮಾನಸಿಕವಾಗಿ ನೊಂದು ರಾಜೀವ ಪಿಕಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದೀಗ ವಿಡಿಯೋ ವೈರಲ್ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ.



