ಗೆಳತಿಗಾಗಿ ಪಾಕಿಸ್ತಾನಕ್ಕೆ ತೆರಳಿ ಜೈಲು ಪಾಲಾದ ಭಾರತದ ಯುವಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಅಕ್ರಮವಾಗಿ ತೆರಳಿದ್ದ 30ರ ವಯಸ್ಸಿನ ಭಾರತದ ಯುವಕನನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಬಾದಲ್ ಬಾಬು ಎಂಬಾತನನ್ನು ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಂಡಿ ಬಹೌದ್ದೀನ್ ಜಿಲ್ಲೆಯಲ್ಲಿ (ಲಾಹೋರ್‌ನಿಂದ ಸುಮಾರು 240 ಕಿಲೋಮೀಟರ್ ದೂರ) ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.

ಬಾಬು ಅವರ ಫೇಸ್‌ಬುಕ್ ಗೆಳತಿ 21ರ ವಯಸ್ಸಿನ ಸನಾ ರಾಣಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ, ಆಕೆ ಆತನನ್ನು ಮದುವೆಯಾಗಲು ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತ ತಮ್ಮ ಪುತ್ರನನ್ನು ಬಿಡುಗಡೆಗೆ ನೆರವು ನೀಡುವಂತೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಯುವಕನ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

ಬಾದಲ್‌ ಬಾಬು ಮತ್ತು ತಾನು ಕಳೆದ ಎರಡೂವರೆ ವರ್ಷಗಳಿಂದ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದೇವೆ. ಆದರೆ ಅವನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಪಾಕಿಸ್ತಾನದ ಯುವತಿ ಸನಾ ರಾಣಿ ಹೇಳಿಕೆ ನೀಡಿದ್ದಾರೆ. ಬಾಬು ಅಕ್ರಮವಾಗಿ ಗಡಿ ದಾಟಿ ಮಂಡಿ ಬಹೌದ್ದೀನ್‌ನ ಸನಾ ರಾಣಿಯ ಮಾಂಗ್ ಗ್ರಾಮವನ್ನು ತಲುಪಿದ್ದಾನೆ, ಅಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಪೊಲೀಸ್‌ ಅಧಿಕಾರಿ ನಾಸೀರ್‌ ಶಾ ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಹೇಳಿಕೆ ನೀಡುವಾಗ ಮತ್ತು ಬಾಬು ಅವರನ್ನು ಮದುವೆಯಾಗಲು ನಿರಾಕರಿಸಿದಾಗ ಸನಾ ರಾಣಿ ಯಾವುದಾದರೂ ಒತ್ತಡಕ್ಕೆ ಒಳಗಾಗಿದ್ದರು ಎಂಬುದನ್ನು ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ. ಆದಾಗ್ಯೂ, ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಬಾಬು ಜೊತೆಗಿನ ಸಂಬಂಧದ ಬಗ್ಗೆ ರಾಣಿ ಮತ್ತು ಅವರ ಕುಟುಂಬದ ಇತರ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕಾನೂನು ದಾಖಲೆಗಳಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ ಬಾಬು ಅವರನ್ನು ಪಾಕಿಸ್ತಾನದ ವಿದೇಶಿ ಕಾಯಿದೆಯ ಸೆಕ್ಷನ್ 13 ಮತ್ತು 14 ರ ಅಡಿಯಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 10 ರಂದು ನಡೆಯಲಿದೆ.

ಪ್ರಧಾನಿ ಮೋದಿಗೆ ಮನವಿ ಮಾಡಿದ ಕುಟುಂಬ
ನಮ್ಮಿಂದ ನಂಬಲು ಸಾಧ್ಯವಾಗಲಿಲ್ಲ. ನಮಗೆ ಈ ಕ್ಷಣದವರೆಗೂ ಅವನು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದಿದ್ದೆವು, ಆದರೆ ಮುಂದಿನ ಕ್ಷಣದಲ್ಲಿ ಅವನು ಪಾಕಿಸ್ತಾನ ಜೈಲಿನಲ್ಲಿರುವುದನ್ನು ಕಂಡು ನಾವು ಆಘಾತಕ್ಕೊಳಗಾಗಿದ್ದೇವೆ. ಇದು ಯಾವುದೋ ಸಿನಿಮಾದಂತಿದೆ ಎಂದು ಬಾರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಖಿತ್ಕಾರಿ ಗ್ರಾಮದಲ್ಲಿ ವಾಸಿಸುವ ಬಾಬು ತಂದೆ ಕಿರ್ಪಾಲ್‌ ಸಿಂಗ್‌ ಹೇಳಿದ್ದಾರೆ.

ನಮಗೆ ನಮ್ಮ ಮಗನನ್ನು ಹಿಂತಿರುಗಿಸಬೇಕಾಗಿದೆ ಮತ್ತು ಅವನನ್ನು ಹೇಗೆ ಮನೆಗೆ ಕರೆತರಬೇಕೆಂದು ನಮಗೆ ತಿಳಿದಿಲ್ಲ. ನಮಗೆ ಸಹಾಯ ಮಾಡುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತಿದ್ದೇವೆ. ಅವನು ತುಂಬಾ ಸರಳವಾದ ಹುಡುಗ. ಎಂದಿಗೂ ಈ ರೀತಿ ನಡೆದುಕೊಂಡಿಲ್ಲ,ಎಂದು ಬಾಬು ಅವರ ತಾಯಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!