ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಲೋಕಸೇವಾ ಆಯೋಗ(ಬಿಪಿಎಸ್‌ಸಿ) ಇತ್ತೀಚೆಗೆ ನಡೆಸಿದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜನ್ ಸೂರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಗುರುವಾರ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.
ಪರೀಕ್ಷೆ ರದ್ದುಗೊಳಿಸುವಂತೆ ನಿತೀಶ್ ಕುಮಾರ್ ಸರ್ಕಾರಕ್ಕೆ 48 ಗಂಟೆಗಳ ಡೆಡ್ ಲೈನ್ ನೀಡಿದ ಮೂರು ದಿನಗಳ ನಂತರ, ರಾಜ್ಯದ ರಾಜಧಾನಿಯ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಶಾಂತ್ ಕಿಶೋರ್ ಇಂದಿನಿಂದ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.
ಡಿಸೆಂಬರ್ 13 ರಂದು ನಡೆದ ಪರೀಕ್ಷೆಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸುವುದು ನನ್ನ ಪ್ರಮಖ ಬೇಡಿಕೆಯಾಗಿದೆ. ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ಹಣಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅಂತಹ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ಶಿಕ್ಷಿಸಬೇಕುಎಂದು ಪ್ರಶಾಂತ್ ಕಿಶೋರ್ ಒತ್ತಾಯಿಸಿದ್ದಾರೆ.
ಪ್ರಶಾಂತ್ ಕಿಶೋರ್ ಆಮರಣಾಂತ ಉಪವಾಸ ನಡೆಸುತ್ತಿರುವ ಈ ಸ್ಥಳವು ನೊಂದ ಆಕಾಂಕ್ಷಿಗಳು ಸುಮಾರು ಎರಡು ವಾರಗಳಿಂದ ಹಗಲು-ರಾತ್ರಿ ಧರಣಿ ನಡೆಸುತ್ತಿರುವ ಗಾರ್ದಾನಿ ಬಾಗ್‌ನಿಂದ ಕೇವಲ ಒಂದೆರಡು ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ.