ಹೊಸದಿಗಂತ ಡಿಜಿಟಲ್ ಡೆಸ್ಕ್:
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4ರಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಮುನ್ನುಗ್ಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೊನೆಗೂ ಸೋಲಿನ ರುಚಿ ಸಿಕ್ಕಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಆರ್‌ಸಿಬಿ ತನ್ನ ಗೆಲುವಿನ ಓಟಕ್ಕೆ ವಿರಾಮ ಹಾಕಿದೆ. ಈ ಸೋಲಿನಿಂದಾಗಿ ನೇರವಾಗಿ ಫೈನಲ್ ಪ್ರವೇಶಿಸುವ ಬೆಂಗಳೂರು ತಂಡದ ಲೆಕ್ಕಾಚಾರದಲ್ಲಿ ಈಗ ಸಣ್ಣ ಬದಲಾವಣೆಯಾಗಿದೆ.
WPL ನಿಯಮದಂತೆ, ಲೀಗ್ ಹಂತ ಮುಗಿದಾಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಬೇಕಾಗುತ್ತದೆ.
ಪ್ರಸ್ತುತ ಆರ್‌ಸಿಬಿ ತಂಡ 10 ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೆ ಈಗಾಗಲೇ ಅಧಿಕೃತವಾಗಿ ಅರ್ಹತೆ ಪಡೆದಿದೆ. ಆದರೆ, ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ಫೈನಲ್ ತಲುಪಲು ತಂಡಕ್ಕೆ ಮುಂದಿನ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಗೆಲುವು ಅತ್ಯಗತ್ಯವಾಗಿದೆ.
ಆರ್‌ಸಿಬಿ ತಂಡಕ್ಕೆ ಫೈನಲ್ ಟಿಕೆಟ್ ಖಚಿತಪಡಿಸಿಕೊಳ್ಳಲು ಎರಡು ಅವಕಾಶಗಳಿವೆ:
ಜನವರಿ 26: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ.
ಜನವರಿ 29: ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯ.
ಈ ಎರಡು ಪಂದ್ಯಗಳ ಪೈಕಿ ಯಾವುದಾದರೂ ಒಂದರಲ್ಲಿ ಗೆದ್ದರೆ ಆರ್‌ಸಿಬಿ ಖಾತೆಗೆ 12 ಅಂಕಗಳು ಸೇರಲಿವೆ. ವಿಶೇಷವೆಂದರೆ, ಉಳಿದ ನಾಲ್ಕು ತಂಡಗಳು ತಮ್ಮ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೂ ಗರಿಷ್ಠ 10 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯ. ಹೀಗಾಗಿ, ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ಜಯಭೇರಿ ಬಾರಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ನೇರವಾಗಿ ಫೈನಲ್ ತಲುಪುವುದು ಖಚಿತವಾಗಲಿದೆ.



