ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಲಾಸ್ ಏಂಜಲೀಸ್ನ ಉತ್ತರದ ಕಡಿದಾದ ಪರ್ವತಗಳಲ್ಲಿ ಮತ್ತೆ ಕಾಳ್ಗಿಚ್ಚು ವ್ಯಾಪಿಸಿಕೊಂಡಿದೆ. 50 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲು ಸರ್ಕಾರ ಆದೇಶ ನೀಡಲಾಗಿದೆ.
ಬುಧವಾರ ಬೆಳಗ್ಗೆ ತಡವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದು ಒಂದೇ ದಿನದೊಳಗೆ ಸುಮಾರು 41 ಚದರ ಕಿಲೋಮೀಟರ್ ವ್ಯಾಪಿಸಿಕೊಂಡು ಮರಗಳು, ಅರಣ್ಯ ಪ್ರದೇಶವನ್ನು ಸುಟ್ಟುಹಾಕಿದೆ. ಇನ್ನಷ್ಟು ವ್ಯಾಪಿಸುತ್ತಿರುವ ಕಾರಣ ಈ ಪ್ರದೇಶದಲ್ಲಿ ಜನರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಲಾಸ್ ಏಂಜಲೀಸ್ ಕೌಂಟಿ ಅಗ್ನಿಶಾಮಕ ದಳದ ಮುಖ್ಯಸ್ಥ ಆಂಥೋನಿ ಮರ್ರೋನ್, ಈ ಪ್ರದೇಶವು ತೀವ್ರ ಪ್ರಮಾಣದ ಕಾಡ್ಗಿಚ್ಚಿನ ಅಪಾಯಕ್ಕೀಡಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳಗಳು ಸತತವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಸದ್ಯಕ್ಕೆ ಶೇಕಡಾ 14 ರಷ್ಟು ಅಗ್ನಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಾಳ್ಗಿಚ್ಚು, ಕಳೆದ 15 ದಿನಗಳಿಗಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಲಾಸ್ ಏಂಜಲೀಸ್ ಮತ್ತು ವೆಂಚುರಾ ಕೌಂಟಿ ಪ್ರದೇಶಗಳಲ್ಲಿ ಶುಕ್ರವಾರದವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಹೊತ್ತಿಕೊಳ್ಳುವ ಹಾಟ್ ಸ್ಪಾಟ್‌ಗಳಲ್ಲಿ ತೀವ್ರ ಎಚ್ಚರಿಕೆ ವಹಿಸಿದ್ದಾರೆ.
ಲಾಸ್ ಏಂಜಲೀಸ್ನ ದಕ್ಷಿಣ ಭಾಗದಲ್ಲಿ ಮಳೆ ಬೀಳುವ ಸಂಭವ ಇದೆ. ಬೆಂಕಿಗೆ ಸುಟ್ಟು ಹೋಗಿರುವ ಪೆಸಿಫಿಕ್ ಪಾಲಿಸೇಡ್ಸ್ ಮತ್ತು ಅಲ್ಟಾಡೆನಾ ಪ್ರದೇಶಗಳಿಗೆ ಅಲ್ಲಿನ ನಿವಾಸಿಗಳು ಮರಳುತ್ತಿದ್ದಾರೆ. ಗುರುವಾರದವರೆಗೆ ಬಿರುಗಾಳಿಯಿಂದ ಕೂಡಿದ ಶುಷ್ಕ ವಾತಾವರಣವಿದೆ. ಶನಿವಾರದಿಂದ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜನವರಿ 7 ರಿಂದ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಲ್ಲಿ ಈವರೆಗೂ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ. 22 ಮಂದಿ ನಾಪತ್ತೆಯಾಗಿದ್ದಾರೆ. 14 ಸಾವಿರಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ.