ಹೊಸದಿಗಂತ ವರದಿ ಅಂಕೋಲಾ:
ಟ್ರಾನ್ಸಪೋರ್ಟ್ ಉದ್ಯಮಿಯೊಬ್ಬರಿಗೆ ಸೇರಿದ ಲಾರಿಯನ್ನು ಅದರ ಚಾಲಕ ಕಳ್ಳತನ ಮಾಡಿ ನಾಪತ್ತೆಯಾಗಿರುವ ಕುರಿತಂತೆ ಉದ್ಯಮಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟ್ರಾನ್ಸಪೋರ್ಟ್ ವ್ಯವಹಾರ ನಡೆಸುತ್ತಿರುವ ತಾಲೂಕಿನ ಅವರ್ಸಾ ಗ್ರಾಮದ ನಿವಾಸಿ ಕಿರಣ ಅನಂತ ನಾಯ್ಕ ಅವರ ಬಳಿ ಕುಮಟಾ ತಾಲೂಕಿನ ದಿವಗಿ ನಿವಾಸಿ ರಾಜೇಶ ಕೃಷ್ಣ ನಾಯ್ಕ ಎಂಬಾತ ಕಳೆದ 20 ದಿನಗಳಿಂದ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ.
ಜನವರಿ 20 ರಂದು ಅವರ್ಸಾದ ಸಂದೀಪ ಮಧುಕರ ನಾಯ್ಕ ಮಾಲಿಕತ್ವದ ಕೆ.ಎ20/ಡಿ1369 ನೋಂದಣಿ ಸಂಖ್ಯೆಯ ಭಾರತ್ ಬೆಂಜ್ ಕಂಪನಿಯ ಲಾರಿಯನ್ನು ಅವರ್ಸಾದಿಂದ ಮಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಕೋಕ್ ಲೋಡ್ ಮಾಡಿ ಗೋವಾದ ಕುಕಳ್ಳಿಯಲ್ಲಿ ಖಾಲಿ ಮಾಡಿದ್ದು ಜನವರಿ 22 ರಂದು ಕುಕಳ್ಳಿಯಿಂದ ಸ್ಟೀಲ್ ಲೋಡ್ ಮಾಡಿ ಹುಬ್ಬಳ್ಳಿಯಲ್ಲಿ ಖಾಲಿ ಮಾಡಿದ್ದಾನೆ.
ಅಲ್ಲಿಂದ ಲಾರಿ ಲೋಡ್ ಮಾಡಿ ಮುರ್ಡೇಶ್ವರಕ್ಕೆ ಬರಬೇಕಿದ್ದವನು ಪೋನ್ ಸ್ವಿಚ್ ಆಫ್ ಮಾಡಿ ಲೋಡ್ ಖಾಲಿ ಮಾಡಿರುವ ಕುರಿತು ಟ್ರಾನ್ಸಪೋರ್ಟ್ ಮಾಲಿಕರಿಗೆ ಯಾವುದೇ ಮಾಹಿತಿ ನೀಡದೇ ಲಾರಿ ಬಾಡಿಗೆ ಹಣ 50 ಸಾವಿರ ರೂಪಾಯಿ ಮತ್ತು ಭಾರತ ಬೆಂಜ್ ಲಾರಿಯೊಂದಿಗೆ ನಾಪತ್ತೆಯಾಗಿದ್ದು ಬಾಡಿಗೆ ಹಣ ಮತ್ತು ಲಾರಿ ಕಳ್ಳತನ ಮಾಡಿ ತೆರಳಿ ನಂಬಿಕೆ ದ್ರೋಹ ಎಸಗಿರುವ ಕುರಿತು ದೂರು ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿದ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.