ಬಾಲಿವುಡ್​ನ ಬಿಗ್​ ಆಫರ್​​ಗೆ ಓಕೆ ಅಂದೇ ಬಿಟ್ರು ಮೊನಾಲಿಸಾ: ಸಿನಿಮಾ ಯಾವುದು? ಡೈರೆಕ್ಟರ್ ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಗ್‌ರಾಜ್‌ ಮಹಾಕುಂಭ ಮೇಳದಲ್ಲಿ ತನ್ನ ವಿಶೇಷ ಕಣ್ಣುಗಳಿಂದ ವೈರಲ್ ಆಗಿದ್ದ 16 ವರ್ಷದ ಮೊನಾಲಿಸಾಗೆ ಈಗ ಸಿನಿಮಾದಲ್ಲಿ ಕೆಲಸ ಮಾಡುವ ಆಫರ್ ಬಂದಿದೆ.

ಮೊನಾಲಿಸಾ ಅವರ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಹಾಕುಂಭ ಮೇಳದಲ್ಲಿ ಮಾಧ್ಯಮಗಳ ಗಮನ ಸೆಳೆದಿದ್ದರು.

ಇದೀಗ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಮತ್ತು ಅವರ ತಂಡ ಬುಧವಾರ ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಮೊನಾಲಿಸಾ ಅಲಿಯಾಸ್ ಮೋನಿ ಭೋನ್ಸಾಲೆ ಅವರ ಮನೆಗೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ತಮ್ಮ ಮುಂಬರುವ ‘ದಿ ಡೈರಿ ಆಫ್ ಮಣಿಪುರ’ ಚಿತ್ರಕ್ಕಾಗಿ ಮೊನಾಲಿಸಾ ಅವರನ್ನು ಆಯ್ಕೆ ಮಾಡಿದ್ದಾರೆ.

‘ದಿ ಡೈರಿ ಆಫ್ ವೆಸ್ಟ್ ಬೆಂಗಾಲ್’ ಖ್ಯಾತಿಯ ನಿರ್ದೇಶಕ ಸನೋಜ್ ಮಿಶ್ರಾ ಮೊನಾಲಿಸಾ ಮತ್ತು ಅವರ ಕುಟುಂಬವನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದು, ತಮ್ಮ ಮುಂಬರುವ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ಮೂಲಕ ಮೊನಾಲಿಸಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುವ ಪ್ರಸ್ತಾಪವನ್ನು ಆಕೆಯ ಕುಟುಂಬ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

ಮೊದಲು ನಮಗೆ ಕರೆ ಮಾಡಿ, ತಮ್ಮ ಮುಂಬರುವ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡುವುದಾಗಿ ಹೇಳಿದರು. ನಂತರ ಅವರು ನನ್ನ ಮನೆಗೆ ಬಂದು ನನ್ನ ಕುಟುಂಬವನ್ನು ಭೇಟಿಯಾಗಿ, ತಮ್ಮ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡುವಂತೆ ಮನವೊಲಿಸಿದರು. ನನ್ನ ಕುಟುಂಬ ನನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದೆ ಎಂದು ಮಿಶ್ರಾ ಭೇಟಿಯ ನಂತರ ಮೊನಾಲಿಸಾ ಪತ್ರಕರ್ತರಿಗೆ ಹೇಳಿದ್ದಾರೆ.

ಈಗಾಗಲೇ ರೀಲ್‌ಗಳಲ್ಲಿ ವೈರಲ್ ಆಗಿದ್ದಾಳೆ. ಆದರೆ ಬೆಳ್ಳಿ ಪರದೆಯ ಮೇಲೆ ಒಂದು ಛಾಪು ಮೂಡಿಸಬೇಕಾದರೆ ನಟನೆಯಲ್ಲಿ ತರಬೇತಿ ಪಡೆಯಬೇಕಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಕಾರ್ಯಾಗಾರದ ಮೂಲಕ ಅವಳಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ನನ್ನ ತಂಡದ ಸದಸ್ಯ ಮಹೇಂದ್ರ ಸಿಂಗ್ ಲೋಧಿ ಅವರಿಗೆ ವಹಿಸಲಾಗಿದೆ. ಕಾರ್ಯಾಗಾರವು ಚಿತ್ರದಲ್ಲಿ ಮೊನಾಲಿಸಾ ನಿರ್ವಹಿಸುವ ಪಾತ್ರದ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ ಎಂದು ಮಿಶ್ರಾ ತಿಳಿಸಿದ್ದಾರೆ.

‘ದಿ ಡೈರಿ ಆಫ್ ಮಣಿಪುರ’ ಚಿತ್ರ ಮಣಿಪುರದ ಸ್ಥಳೀಯ ಸಮಸ್ಯೆಗಳನ್ನು ಸಹ ಒಳಗೊಂಡ ಒಂದು ಪ್ರೇಮ ಕಥೆಯಾಗಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!