ಹೊಸದಿಗಂತ ವರದಿ,ಚಿತ್ರದುರ್ಗ
ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್ ಜನರಿಗೆ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ. ಈ ಘಟನೆ ಕುರಿತು ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ಪೊಲೀಸರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಐಜಿಪಿ ರವಿ ಕಾಂತೇಗೌಡ ತಿಳಿಸಿದರು.
ನೂತನ ಐಜಿಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಚಿತ್ರದುರ್ಗ ಎಸ್ಪಿ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋದಕ್ಕೆ ಪ್ರಾರಂಭಿಸಿದ್ದೇವೆ. ಜೈಲಿಗೆ ಕಳುಹಿಸಲು ಸರ್ಕಾರ ಸೂಚಿಸಿದೆ. ಕಿರುಕುಳ ಕೊಡುವವರ ವಿರುದ್ದ ಕಠಿಣ ಕ್ರಮಕ್ಕಾಗಿ ಸೂಚಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ೧೧೨ ಈ ನಂಬರ್ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಪೊಲೀಸ್ ಠಾಣೆ, ಕಂಟ್ರೋಲ್ ರೂಮ್ ಸೇರಿದಂತೆ ನಮ್ಮ ಅಧಿಕಾರಿಗಳನ್ನು ಸಂಪರ್ಕಿಸಬಹುದು. ನನ್ನನ್ನು ಕೂಡ ಅವರು ಸಂಪರ್ಕ ಮಾಡಬಹುದು ಎಂದರು.
ಯಾವುದೇ ಕಾರಣಕ್ಕೂ ಡ್ರಗ್ಸ್ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವಂತಿಲ್ಲ. ಗಾಂಜಾ ಸೇವನೆ ಮಾಡುವವರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ. ಅವರ ಮೂಲಕವೇ ಮಾಹಿತಿ ಸಂಗ್ರಹಿಸಿ ಕಠಿಣ ಕ್ರಮ ಜರುಗಿಸಲಾಗುವುದು. ಅವರೆಲ್ಲರಿಗೂ ಅರಿವು ಮೂಡಿಸುವ ಕೆಲಸ ಆಗುತ್ತಿದೆ. ಹದಿಹರೆಯದವರು ಡ್ರಗ್ಸ್ ಸೇವಿಸುತ್ತಾರೆ ಎನ್ನಲಾಗಿದೆ. ಹಾಗಾಗಿ ನಮ್ಮ ಅಧಿಕಾರಿಗಳು ತಿಂಗಳಿಗೊಮ್ಮೆ ಕಾಲೇಜುಗಳಿಗೆ ಹೋಗಿ ಅಭಿಯಾನ ಮಾಡಬೇಕು. ವಿಧ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆ ಐಸಿಹಾಸಿಕ ನಗರವಾಗಿ ಪ್ರಸಿದ್ದಿ ಪಡೆದಿದೆ. ನಮ್ಮ ವ್ಯಾಪ್ತಿಯಲ್ಲಿ ಚಿತ್ರದುರ್ಗ ಜಿಲ್ಲೆ ಸೇರಿರುವುದು ಹೆಮ್ಮೆಯ ವಿಷಯ. ಇಂತಹ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಿಂದೆ ಇದ್ದ ಅಧಿಕಾರಿಗಳು ಇದನ್ನು ಸಮರ್ಥವಾಗಿ ನಿಭಾಹಿಸಿದ್ದಾರೆ. ಸರ್ಕಾರದ ಪ್ರಮುಖ ಉದ್ದೇಶ, ಜನಸ್ನೇಹಿ ವ್ಯವಸ್ಥೆ ಜಾರಿಗೊಳಿಸುವುದು. ಸರ್ಕಾರ ಕೊಟ್ಟಿರೋ ಸೂಚನೆ ಕುರಿತು ಚರ್ಚಿಸಲು ಅಧಿಕಾರಗಳ ಸಭೆ ನಡೆಸಲಾಗುತ್ತಿದೆ. ನಾವು ಜನರೊಂದಿಗೆ ಇದ್ದು, ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ. ಈ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.