ಹೊಸದಿಗಂತ ವರದಿ, ಅಂಕೋಲಾ:
ಸಾಲ ವಸೂಲಾತಿ ಮಾಡಿರುವ ಹಣ ಕಳೆದುಕೊಂಡ ಬೇಸರದಿಂದ ಮೈಕ್ರೊ ಫೈನಾನ್ಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವ ತನ್ನ ಕುತ್ತಿಗೆ ಮತ್ತು ಕೈ ಗೆ ಇರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ ಘಟನೆ ತಾಲೂಕಿನಲ್ಲಿ ನಡೆದಿದೆ.
ಭಾರತ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಾಲ ವಸೂಲಾತಿ ಸಿಬ್ಬಂದಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗುರುರಾಜ ಸೋಮಲಿಂಗ ಬಂಡಿವಡ್ಡರ(24) ಆತ್ಮಹತ್ಯೆಗೆ ಯತ್ನಿಸಿದ ಮೈಕ್ರೋಸಾಫ್ಟ್ ಸಿಬ್ಬಂದಿಯಾಗಿದ್ದು ತಾಲೂಕಿನ ಸುಂಕಸಾಳ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮೈಕ್ರೋಫೈನಾನ್ಸ್ ವತಿಯಿಂದ ನೀಡಲಾದ ಸಾಲ ವಸೂಲಾತಿ ಮಾಡುತ್ತಿದ್ದ ಈತ ವಸೂಲಾತಿ ಮಾಡಿರುವ 40 ಸಾವಿರ ರೂಪಾಯಿ ಹಣ ಕಳೆದುಕೊಂಡ ಬೇಸರದಿಂದ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದ ಎಂದು ತಿಳಿದು ಬಂದಿದೆ.
ಅಸ್ವಸ್ಥಗೊಂಡ ಸಿಬ್ಬಂದಿಯನ್ನು ಸಹದ್ಯೋಗಿಗಳು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.