February 3, 2026
Tuesday, February 3, 2026
spot_img

CINE | 19 ವರ್ಷಗಳಿಂದ ಸೆಟ್ಟೇರದ ‘ಮಿಸ್ಟರಿ ಪ್ರಾಜೆಕ್ಟ್’! ಉಪೇಂದ್ರ–ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ರಿಲೀಸ್‌ಗೆ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಬಹುಕಾಲದ ‘ಮಿಸ್ಟರಿ ಪ್ರಾಜೆಕ್ಟ್’ ಎನ್ನಿಸಿಕೊಂಡಿದ್ದ ರಕ್ತ ಕಾಶ್ಮೀರ ಸಿನಿಮಾಗೆ ಇದೀಗ ಜೀವ ಬಂದಿದೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಸಿನಿಮಾ, ಆರಂಭಗೊಂಡು ಸುಮಾರು 19 ವರ್ಷಗಳ ಬಳಿಕ ತೆರೆಗೆ ಬರಲು ಸಜ್ಜಾಗಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಈ ಚಿತ್ರಕ್ಕೆ ಕೊನೆಗೂ ಬಿಡುಗಡೆ ದಿನಾಂಕ ಫಿಕ್ಸ್ ಆಗಿರುವುದು ಸಿನಿಪ್ರೇಮಿಗಳಿಗೆ ಕುತೂಹಲ ಹೆಚ್ಚಿಸಿದೆ.

2007ರಲ್ಲಿ ಸೆಟ್ಟೇರಿದ್ದ ಈ ಸಿನಿಮಾ ಆ ಕಾಲಕ್ಕೆ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಸುಮಾರು 6 ಕೋಟಿ ವೆಚ್ಚದಲ್ಲಿ ಎಂಡಿಎಂ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ಶೂಟಿಂಗ್ ಹಾಗೂ ಪೋಸ್ಟ್‌ಪ್ರೊಡಕ್ಷನ್ ಎಲ್ಲವೂ ಪೂರ್ಣಗೊಂಡಿದ್ದರೂ ವಿವಿಧ ಕಾರಣಗಳಿಂದ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಗ್ರಾಫಿಕ್ಸ್‌ ಬಳಕೆ ಸೇರಿದಂತೆ ತಾಂತ್ರಿಕವಾಗಿ ವಿಭಿನ್ನ ಪ್ರಯೋಗಗಳನ್ನು ಮಾಡಿದ್ದು ಈ ಚಿತ್ರದ ವಿಶೇಷವಾಗಿತ್ತು.

‘ರಕ್ತ ಕಾಶ್ಮೀರ’ ಚಿತ್ರದಲ್ಲಿ ವಿಶೇಷ ಹಾಡೊಂದಿದೆ. ವಿಷ್ಣುವರ್ಧನ್, ಅಂಬರೀಶ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್ ಸೇರಿ ಕನ್ನಡದ 14 ನಾಯಕರು ಒಂದೇ ಹಾಡಿನಲ್ಲಿ ನಟಿಸಿದ್ದಾರೆ.

ಅಶೋಕ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದ ಮುಹೂರ್ತ, ಭರ್ಜರಿ ತಾರಾಗಣ ಮತ್ತು ದೊಡ್ಡ ನಿರೀಕ್ಷೆಗಳ ನಡುವೆ ಆರಂಭಗೊಂಡಿದ್ದ ಈ ಸಿನಿಮಾ, ಇದೀಗ ವಿತರಕ ಮಾರ್ಸ್ ಸುರೇಶ್ ಅವರ ಮೂಲಕ ಬಿಡುಗಡೆಯ ಹಾದಿ ಹಿಡಿದಿದೆ. ಹಲವು ವರ್ಷಗಳ ಬಳಿಕ ‘ರಕ್ತ ಕಾಶ್ಮೀರ’ ಪ್ರೇಕ್ಷಕರ ಮುಂದೆ ಹೇಗೆ ಮೂಡಿಬರಲಿದೆ ಎಂಬುದು ಈಗ ಸಿನಿರಂಗದ ಹಾಟ್ ಟಾಪಿಕ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !