ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಮೀಡಿಯನ್ ಸಮಯ್ ರೈನಾ ಅವರ ಯೂಟ್ಯೂಬ್ ರಿಯಾಲಿಟಿ ಶೋ “ಇಂಡಿಯಾಸ್ ಗಾಟ್ ಲ್ಯಾಟೆಂಟ್” ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ ಪಾಡ್‌ಕಾಸ್ಟರ್ ರಣವೀರ್ ಅಲ್ಹಾಬಾದಿಯಾ ಅವರ ಸಾಮಾಜಿಕ ಮಾಧ್ಯಮದ ಅನುಯಾಯಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
‘ಬಿಯರ್‌ಬೈಸೆಪ್ಸ್’ ಎಂಬ ಹೆಸರು ಹೊಂದಿರುವ ರಣವೀರ್ ಅಲ್ಹಾಬಾದಿಯಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 50,000 ಅನುಯಾಯಿಗಳು ಕಡಿಮೆಯಾಗಿದ್ದಾರೆ.
BeerBiceps ಫೆಬ್ರುವರಿ 9 ರಂದು 45.27 ಲಕ್ಷ ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿತ್ತು. ಅದಾದ ಮೂರು ದಿನಗಳ ನಂತರ, ಫೆಬ್ರುವರಿ 11 ರಂದು, ಅನುಯಾಯಿಗಳ ಸಂಖ್ಯೆ 44.80 ಲಕ್ಷಕ್ಕೆ ಇಳಿಯಿತು. ‘ranveerallahbadia’ ಎಂಬ ಹೆಸರಿನ ಅವರ ಇನ್ನೊಂದು ಖಾತೆಯಲ್ಲಿಯೂ ಭಾನುವಾರ 34.39 ಲಕ್ಷವಿದ್ದ ಅನುಯಾಯಿಗಳ ಸಂಖ್ಯೆ ಮಂಗಳವಾರ 34.21 ಲಕ್ಷಕ್ಕೆ ಕುಸಿದಿದೆ ಎಂದಿದೆ.
ಸಾಮಾಜಿಕ ಮಾಧ್ಯಮದ ಪ್ರಭಾವಿ ರಣವೀರ್ ಅಲ್ಹಾಬಾದಿಯಾ ಇತ್ತೀಚೆಗೆ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಕಂಟೆಂಟ್ ಕ್ರಿಯೇಟರ್ ಅಪೂರ್ವ ಮುಖಿಜಾ ಮತ್ತು ಕಾಮಿಕ್ಸ್ ಆಶಿಶ್ ಚಂಚಲಾನಿ ಮತ್ತು ಜಸ್ಪ್ರೀತ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಪೋಷಕರು ಮತ್ತು ಲೈಂಗಿಕತೆ ಕುರಿತಂತೆ ಅಶ್ಲೀಲ ಮತ್ತು ಅಸಭ್ಯ ಹೇಳಿಕೆಯನ್ನು ನೀಡಿದ್ದರು. ಈ ಕ್ಲಿಪ್ ವೈರಲ್ ಆಗಿತ್ತು ಮತ್ತು ರಣವೀರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.