ಹೊಸದಿಗಂತ ವರದಿ, ಹಾಸನ :
ಖಾತಾ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಆಲೂರು ಪಟ್ಟಣದಲ್ಲಿ ಪಂಚಾಯಿತಿಯಲ್ಲಿ ನಡೆದಿದೆ.
ಬಸವರಾಜು ಲೋಕಾಯುಕ್ತ ಬಲೆಗೆ ಬಿದ್ದ ಆಲೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ. ಪಟ್ಟಣದ ಅಧಿಕಾರಿ ಯನಸ್ ನವೀದ್ ಎಂಬುವರು ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಹಿಂದೆ ಇದ್ದ ಮುಖ್ಯಾಧಿಕಾರಿ ವರ್ಗಾವಣೆಯಾಗಿದ್ದರಿಂದ ಹಲವು ತಿಂಗಳಿಂದ ಖಾತೆ ಆಗಿರಲಿಲ್ಲ.
ಇತ್ತೀಚೆಗಷ್ಟೆ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬಸವರಾಜು ಖಾತೆ ಮಾಡಿಕೊಡಲು 1.20 ಲಕ್ಷಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು. ಮೊಲದ ಕಂತಿನ ಹಣವಾಗಿ 50 ಸಾವಿರ ಪಡೆದಿದ್ದ ಮುಖ್ಯಾಧಿಕಾರಿ ಬಸವರಾಜು, ಎರಡನೇ ಕಂತಿನ ಹಣವಾದ 70 ಸಾವಿರ ರೂಗಳನ್ನು ಇಂದು ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇನ್ನು ಲಂಚ ಸ್ವೀಕರಿಸಿದ ಬಳಿಕ ಹಾಸನ ಲೋಕಾಯುಕ್ತ ಎಸ್ಪಿ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಗಳಾದ ಶಿಲ್ಪ ಮಂಜುನಾಥ್, ಬಾಲು ದಾಳಿ ನಡೆಸಿ ಲಂಚವಾಗಿ ಸ್ವೀಕರಿಸಿದ್ದ ಹಣದ ಸಮೇತ ಮುಖ್ಯಾಧಿಕಾರಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಶಿಲ್ಪ ಮಂಜುನಾಥ್,ಬಾಲು ಮಾಹಿತಿ ನೀಡಿದ್ದು,ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಹೇಳಿದರು