ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅವರನ್ನು ಭೇಟಿ ಮಾಡಿ ರಾಜ್ಯದ 6 ಹೊಸ ನೀರಾವರಿ ಯೋಜನೆಗಳಿಗೆ ಅನುಮೋದನೆ ಮತ್ತು ಹಣಕಾಸಿನ ನೆರವು ನೀಡುವಂತೆ ಕೋರಿದರು. ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ಮತ್ತು ಹಣ ಬಿಡುಗಡೆಗೂ ಮನವಿ ಮಾಡಿದರು.
ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 11,123 ಕೋಟಿ ರೂ.ಗಳ ಅಂದಾಜು ವೆಚ್ಚದ ಆರು ಹೊಸ ನೀರಾವರಿ ಯೋಜನೆಗಳಿಗೆ ಅನುದಾನ ಕೋರಿದ್ದಾರೆ.
ಈ ಆರು ಹೊಸ ಪ್ರಸ್ತಾವನೆಗಳಲ್ಲಿ ಪ್ರವಾಹ ನಿರ್ವಹಣೆ ಮತ್ತು ಬೆಣ್ಣೆಹಳ್ಳದಲ್ಲಿ ಗಡಿ ಪ್ರದೇಶದ ಕಾರ್ಯಕ್ರಮ; ಭೀಮಾ ನದಿಗೆ ಅಡ್ಡಲಾಗಿ ಸೋಂತಿ ಏತ ನೀರಾವರಿ ಯೋಜನೆಯಡಿ 16,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು, ಮಲಪ್ರಭಾ ಕಾಲುವೆ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಇಂಡಿ ಶಾಖಾ ಕಾಲುವೆ, ಘಟಪ್ರಭಾ ಬಲದಂಡೆ ಕಾಲುವೆ, ಚಿಕ್ಕೋಡಿ ಶಾಖಾ ಕಾಲುವೆ ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ಕಾಮಗಾರಿ ಸೇರಿವೆ.
ಈ ಉದ್ದೇಶಿತ ಯೋಜನೆಗಳಿಂದ ವಿಜಯಪುರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ.
ಮೇಕೆದಾಟು ಯೋಜನೆಗೆ ಮಂಜೂರಾತಿ, ಭದ್ರಾ ಮೇಲ್ದಂಡೆ ಯೋಜನೆಗೆ ಆರ್ಥಿಕ ನೆರವು, ಕೃಷ್ಣಾ ಜಲವಿವಾದ ನ್ಯಾಯಮಂಡಳಿ (ಕೆಡಬ್ಲ್ಯುಡಿಟಿ-2) ತೀರ್ಪಿನ ಗೆಜೆಟ್ ಅಧಿಸೂಚನೆ, ಕಳಸಾ-ಭಂಡೂರಿ ನಾಲಾ ಯೋಜನೆಗಳಿಗೆ ಮಂಜೂರಾತಿ, ಮಹಾನದಿಯಿಂದ ಹೆಚ್ಚುವರಿ ನೀರನ್ನು ಕೃಷ್ಣಾ-ಕಾವೇರಿ ನದಿಗೆ ಮತ್ತು ಪೆನ್ನಾರ್-ಪಾಲಾರ್ ಜಲಾನಯನ ಪ್ರದೇಶಗಳಿಗೆ ಹರಿಸುವ ಕುರಿತು ಮತ್ತು ರಾಜ್ಯದ ಇತರ ನೀರಾವರಿ ಯೋಜನೆಗಳ ಬಗ್ಗೆಯೂ ಕೇಂದ್ರ ಜಲಶಕ್ತಿ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.