ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಬಾಲಿವುಡ್‌ನ ಖ್ಯಾತ ನಾಯಕ ನಟಿ ಕತ್ರಿನಾ ಕೈಫ್ ಸರ್ಪಸಂಸ್ಕಾರ ಸೇವೆಯನ್ನು ಸಮಾಪ್ತಿಗೊಳಿಸಿದರು.
ಮಂಗಳವಾರ ಕ್ಷೇತ್ರಕ್ಕಾಗಮಿಸಿ ಸೇವೆಯನ್ನು ಆರಂಭಿಸಿದ ನಟಿ ಬುಧವಾರ ವಿವಿಧ ವೈದಿಕ ವಿದಿ ವಿಧಾನಗಳಲ್ಲಿ ಭಕ್ತಿಯಿಂದ ಪಾಲ್ಗೊಂಡರು.ಸೇವೆ ಸಮಾಪ್ತಿಗೊಳಿಸಿದ ಬಳಿಕ ಶ್ರೀ ದೇವರ ದರುಶನ ಮಾಡಿದ ಅವರಿಗೆ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಿಸಿದರು.
ಬುಧವಾರ ಮುಂಜಾನೆ ಸರ್ಪಸಂಸ್ಕಾರ ಯಾಗ ಶಾಲೆಯಲ್ಲಿ ಎರಡನೇ ದಿನದ ವೈದಿಕ ವಿದಿವಿಧಾನಗಳಲ್ಲಿ ಅವರು ಭಾಗವಹಿಸಿದರು.ಆರಂಭದಲ್ಲಿ ಬ್ರಹ್ಮಚಾರಿ ಆರಾಧನೆ ಮತ್ತು ಗೋಪೂಜೆ ನೆರವೇರಿಸಿದರು. ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ನಡೆದ ಎರಡನೇ ದಿನದ ವೈದಿಕ ವಿದಿ ವಿಧಾನಗಳನ್ನು ಪುರೋಹಿತ ನಂದಕಿಶೋರ್ ಭಟ್ ಹಾಗೂ ಕ್ರಿಯಾಕತೃ ಸುಧೀರ್ ಭಟ್ ನೆರವೇರಿಸಿದರು. ವಿದಿವಿಧಾನಗಳಲ್ಲಿ ಹಿಂದಿ ಚಲನಚಿತ್ರದ ಖ್ಯಾತ ನಾಯಕನಟಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ಆಶ್ಲೇಷ ಬಲಿ ಸೇವೆ
ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ದ್ವಿತೀಯ ದಿನದ ವೈದಿಕ ವಿದಿ ವಿಧಾನಗಳನ್ನು ಪೂರೈಸಿದ ಬಳಿಕ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕತ್ರಿನಾ ಕೈಪ್ ಆಗಮಿಸಿದರು. ಆರಂಭದಲ್ಲಿ ಆಶ್ಲೇಷ ಬಲಿ ಸೇವೆಗೆ ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ನಂತರ ಶ್ರೀ ದೇವಳದಲ್ಲಿ ಮಹಾಪೂಜೆಯನ್ನು ಭಕ್ತಿಯಿಂದ ವೀಕ್ಷಿಸಿದರು. ಬಳಿಕ ನಾಗಪ್ರತಿಷ್ಠೆ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.ನಂತರ ಶ್ರೀ ದೇವರ ದರುಶನ ಪಡೆದ ಅವರಿಗೆ ದೇವಳದ ಅರ್ಚಕ ರಮೇಶ್ ನೂರಿತ್ತಾಯರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಇವರೊಂದಿಗೆ ದೇವ ವಶಿಷ್ಠ ಹಾಗೂ ಶಿವಾನಿ ವಶಿಷ್ಠ ಭಾರದ್ವಜ್ ಆಗಮಿಸಿದ್ದರು.ಶ್ರೀ ದೇವಳದ ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್ ಉಪಸ್ಥಿತರಿದ್ದರು.
ಮಾಸ್ಕ್, ತಲೆಗೆ ದುಪ್ಪಟ್ಟ
ಬುಧವಾರ ಕೂಡಾ ಮಂಗಳವಾರದಂತೆ ಮುಖಕ್ಕೆ ಮಾಸ್ಕ್, ತಲೆಗೆ ದುಪ್ಪಟ್ಟ ಹಾಕಿಕೊಂಡೇ ಓಡಾಟ ನಡೆಸಿದ್ದರು. ಹಸುರು ಕಂದು ಬಣ್ಣದ ಚೂಡಿದರ್ ಧರಿಸಿದ್ದ ಕತ್ರಿನಾ ಕೈಫ್ ಅವರು ಎರಡನೇ ದಿನವೂ ಮುಖ ಮುಚ್ಚಿಕೊಂಡು, ಮಾಧ್ಯಮದವರಿಂದ ಅಂತರ ಕಾಯ್ದುಕೊಂಡೇ ಓಡಾಡಿದರು. ಮಹಾಪೂಜೆ ವೇಳೆ ಮಾಸ್ಕ್ ತೆಗೆದು ಪೂಜೆಯಲ್ಲಿ ಪಾಲ್ಗೊಂಡರು.