ಹೊಸದಿಗಂತ ಡಿಜಿಟಲ್ ಡೆಸ್ಕ್
ತಮಿಳು ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಜನ ನಾಯಗನ್’ ಸಿನಿಮಾ ಈಗ ಬಿಡುಗಡೆಗಾಗಿ ಹೊಸ ಹಾದಿಯನ್ನು ಹಿಡಿದಿದೆ. ಅಂದುಕೊಂಡಂತೆ ನಡೆದಿದ್ದರೆ ಜನವರಿ 9ರಂದೇ ತೆರೆಗೆ ಬರಬೇಕಿದ್ದ ಈ ಚಿತ್ರ, ಸೆನ್ಸಾರ್ ಪ್ರಮಾಣಪತ್ರ ಸಿಗದೆ ಸಂಕಷ್ಟಕ್ಕೆ ಸಿಲುಕಿತ್ತು. ಈಗ ಸಿಕ್ಕಿರುವ ಲೇಟೆಸ್ಟ್ ಅಪ್‌ಡೇಟ್ ಪ್ರಕಾರ, ಚಿತ್ರತಂಡ ತನ್ನ ಕಾನೂನು ಹೋರಾಟವನ್ನು ಹಿಂಪಡೆಯಲು ನಿರ್ಧರಿಸಿದೆ.
ಜನವರಿ 9ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರವು ಸೆನ್ಸಾರ್ ಸಮಸ್ಯೆಯಿಂದಾಗಿ ಈಗಾಗಲೇ ಮೂರು ವಾರಗಳನ್ನು ಕಳೆದುಕೊಂಡಿದೆ.
ತಮಿಳುನಾಡು ಸೆನ್ಸಾರ್ ಮಂಡಳಿಯು ಚಿತ್ರದ ಕೆಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ಅದನ್ನು ಪುನರ್ ವಿಮರ್ಶಾ ಸಮಿತಿಗೆ ಶಿಫಾರಸು ಮಾಡಿತ್ತು. ಇದನ್ನು ಪ್ರಶ್ನಿಸಿ ನಿರ್ಮಾಣ ಸಂಸ್ಥೆ ಕೆವಿಎನ್ ಸ್ಥಳೀಯ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‌ವರೆಗೆ ಅಲೆದಾಡಿತ್ತು.
ಕೋರ್ಟ್‌ನಲ್ಲಿ ಪ್ರಕರಣ ದೀರ್ಘಕಾಲ ಎಳೆಯಬಹುದು ಮತ್ತು ಸದ್ಯಕ್ಕೆ ಯಾವುದೇ ಪರಿಹಾರ ಸಿಗುವ ಲಕ್ಷಣಗಳು ಕಾಣದ ಕಾರಣ, ಚಿತ್ರತಂಡ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ. ಹೂಡಿದ್ದ ಎಲ್ಲಾ ಕಾನೂನು ಪ್ರಕರಣಗಳನ್ನು ಹಿಂಪಡೆಯಲು ಕೆವಿಎನ್ ಸಂಸ್ಥೆ ಮುಂದಾಗಿದೆ.
ಕಾನೂನು ಹೋರಾಟಕ್ಕಿಂತ ಸೆನ್ಸಾರ್ ಮಂಡಳಿಯ ನಿಯಮದಂತೆ ಪುನರ್ ವಿಮರ್ಶಾ ಸಮಿತಿ’ಯ ಮುಂದೆ ಚಿತ್ರವನ್ನು ಪ್ರದರ್ಶಿಸಿ ಪ್ರಮಾಣಪತ್ರ ಪಡೆಯುವುದು ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಸಮಯ ಉಳಿಸುವ ಸಲುವಾಗಿ ಕೋರ್ಟ್ ಮೊರೆ ಹೋಗಿದ್ದ ತಂಡಕ್ಕೆ, ಈಗ ಅಂತಿಮವಾಗಿ ಸೆನ್ಸಾರ್ ಮಂಡಳಿಯೇ ದಾರಿದೀಪವಾಗಬೇಕಿದೆ.



