ಪಿಜಿಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್: ವಿದ್ಯಾರ್ಥಿ ಮೇಲೆ ಹಲ್ಲೆಗೈದ ಮಾಲೀಕ

ಹೊಸದಿಗಂತ ವರದಿ, ಮಂಗಳೂರು:

ಪೇಯಿಂಗ್ ಗೆಸ್ಟ್ (ಪಿಜಿ) ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ನೀಡಿ ಚೆನ್ನಾಗಿಲ್ಲ ಎಂದು ಕಮೆಂಟ್ ಹಾಕಲಾಗಿದೆ ಎಂದು ಆರೋಪಿಸಿ ಪಿ. ಜಿ. ಮಾಲಕ ಮತ್ತು ಆತನ ಸಹಚರರು ಸೇರಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆಗೈದ ಘಟನೆ ನಗರದಲ್ಲಿ ನಡೆದಿದೆ.

ನಗರದಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವ ಕಲಬುರಗಿ ಜಿಲ್ಲೆಯ ಮೂಲದ ವಿಕಾಸ್ (೧೮) ಎಂಬಾತನ ಮೇಲೆ ಮಾರ್ಚ್ ೧೭ರ ರಾತ್ರಿಗೆ ಹಲ್ಲೆ ನಡೆಸಲಾಗಿದ್ದು, ಕದ್ರಿ ದೇವಸ್ಥಾನದ ಬಳಿಯ ಪಿಜಿಯೊಂದರ ವಿರುದ್ಧ ವಿದ್ಯಾರ್ಥಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ವಿಕಾಸ್ ಕಳೆದ ಆರು ತಿಂಗಳಿನಿಂದ ಕದ್ರಿಯ ಪಿಜಿಯಲ್ಲಿದ್ದು, ಊಟದಲ್ಲಿ ಹುಳ ಬಿದ್ದಿರುವುದು, ಶುಚಿತ್ವ ಇಲ್ಲದಿರುವುದು, ಅತಿ ಕೆಟ್ಟ ಶೌಚಾಲಯ ವ್ಯವಸ್ಥೆ ಯಿಂದ ಬೇಸತ್ತು ಬೇರೆ ಪಿ. ಜಿ. ಗೆ ಹೋಗಿದ್ದ. ಈ ಬಗ್ಗೆ ಗೂಗಲ್‌ನಲ್ಲಿ ಪಿ. ಜಿ. ಬಗ್ಗೆ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ಏನೂ ಚೆನ್ನಾಗಿಲ್ಲ ಎಂದು ಕಮೆಂಟ್ ಹಾಕಿದ್ದ. ಇದನ್ನು ಗಮನಿಸಿದ ಪಿ. ಜಿ. ಮಾಲಕ ಸಂತೋಷ್ ಎಂಬಾತ, ಕಮೆಂಟ್ ಅಳಿಸಿ ಹಾಕುವಂತೆ ಬೆದರಿಕೆ ಹಾಕಿದ್ದ. ಅಳಿಸಿ ಹಾಕದಿರುವುದಕ್ಕೆ ಸಂತೋಷ್ ಮತ್ತು ಆತನ ಸಹಚರರು ಸೇರಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಕೈಯಿಂದ ಹಲ್ಲೆ ಮಾಡಿದ್ದು ತೊಂದರೆ ಇಲ್ಲ ಎಂದು ಹೇಳಿ ಪ್ರಕರಣ ದಾಖಲಿಸಲಾಗಿಲ್ಲ. ಪೊಲೀಸರು ದೂರು ಪಡೆದು ಹಿಂದಕ್ಕೆ ಕಳಿಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿ ವಿಕಾಸ್ ಪ್ರತಿಕ್ರಿಯಿಸಿ, ‘ನಾವು ಪೊಲೀಸ್ ದೂರು ಕೊಟ್ಟಿದ್ದೇವೆ, ಆದರೆ ಕೈಯಲ್ಲಿ ಹಲ್ಲೆ ಮಾಡಿದ್ದಕ್ಕೆ ದೂರು ದಾಖಲು ಮಾಡುವುದಿಲ್ಲ ಎಂದಿದ್ದಾರೆ. ನಮಗೇನೂ ಗೊತ್ತಿರಲಿಲ್ಲ. ವಿದ್ಯಾರ್ಥಿ ಸಂಘಟನೆಯವರದ್ದೂ ಪರಿಚಯ ಇಲ್ಲ. ಅಲ್ಲಿ ಪಿ. ಜಿ. ಏನೂ ಚೆನ್ನಾಗಿಲ್ಲ. ನಾನೂ ಅಲ್ಲಿದ್ದೆ. ಹಾಗಾಗಿ ಕಮೆಂಟ್ ಹಾಕಿದ್ದೆ. ಅದಕ್ಕೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!