ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ನಾಲ್ವರು ಕೂಲಿ ಕಾರ್ಮಿಕರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಒಂದೇ ರೂಮ್‌ನಲ್ಲಿ ಮಲಗಿದ್ದ ಸ್ಥಿತಿಯಲ್ಲೇ ನಾಲ್ವರು ಮೃತರಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಮುತ್ಸಂದ್ರ ಗ್ರಾಮದ ಛೋಟಾಸಾಬ್ ಎಂಬುವರಿಗೆ ಸೇರಿದ ಲೇಬರ್ ಶೆಡ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರು ಅಸ್ಸಾಂ ಮೂಲದವರಾಗಿದ್ದು, ಸಮೀಪದ ಕೋಕಾಕೋಲಾ ವೇರ್‌ಹೌಸ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರತಿದಿನದಂತೆ ಕೆಲಸ ಮುಗಿಸಿ ಶೆಡ್‌ಗೆ ಮರಳಿದ್ದ ಕಾರ್ಮಿಕರು ರಾತ್ರಿ ಮಲಗಿದ್ದು, ಬೆಳಿಗ್ಗೆ ಎಚ್ಚರವಾಗದೇ ಇದ್ದಾಗ ಸ್ಥಳೀಯರಿಗೆ ಅನುಮಾನ ಮೂಡಿದೆ.
ಇದನ್ನೂ ಓದಿ:
ವಿಷಯ ತಿಳಿಯುತ್ತಿದ್ದಂತೆ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಪ್ರಾಥಮಿಕವಾಗಿ ಉಸಿರುಗಟ್ಟಿಕೆ, ವಿಷಕಾರಿ ಅನಿಲ ಅಥವಾ ಆಹಾರ ಸೇವನೆಗೆ ಸಂಬಂಧಿಸಿದ ಕಾರಣಗಳ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.



