ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಇದರ ನಡುವೆ ನನಗೆ ಯಾರೂ ಹೂವಿನ ಹಾರ ಹಾಕಬೇಡಿ ಎಂದು ಕಾರ್ಯಕರ್ತತರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ. ಆದರೆ ಪ್ರಮಾಣವಚನಕ್ಕೆ ಹೆಚ್ಚು ಜನ ಸೇರದೆ ತಮ್ಮ ಜಿಲ್ಲೆಗಳಲ್ಲೇ ಸಂಭ್ರಮಿಸುವಂತೆ ಮನವಿ ಮಾಡಿದ್ದಾರೆ.
ಹೂವಿನ ಹಾರಗಳಿಂದ ಅಲರ್ಜಿ
ಇದೇ ವೇಳೆ ತಮಗೆ ಹೂವಿನ ಹಾರಗಳಿಂದ ಅಲರ್ಜಿ ಉಂಟಾಗುವ ಕುರಿತು ತಿಳಿಸಿದ ಡಿಕೆಶಿ, ಹೂವಿನ ಹಾರಗಳನ್ನು ಹಾಕಬೇಡಿ. ವಿಶೇಷವಾಗಿ ಹಾರಗಳಲ್ಲಿ ಬಳಸುವ ಸುಗಂಧರಾಜ ಹೂವು ಎಂದರೆ ನನಗೆ ಅಲರ್ಜಿ. ಆ ಹೂವು ಮೈಗೆ ತಗುಲಿದರೆ ತೀವ್ರವಾದ ತುರಿಕೆ ಆರಂಭವಾಗುತ್ತದೆ. ಈ ಕಾರಣದಿಂದಲೇ ನಾನು ಹೂವಿನ ಹಾರಗಳನ್ನು ನಿಷೇಧಿಸಿದ್ದೇನೆ. ಹೀಗಾಗಿ ಕಾರ್ಯಕರ್ತರು ತಮ್ಮ ಪ್ರೀತಿಯನ್ನು ಹೂವಿನ ಹಾರಗಳ ಬದಲಿಗೆ ಹಾರೈಕೆಗಳ ಮೂಲಕ ವ್ಯಕ್ತಪಡಿಸಬೇಕೆಂದು ವಿನಂತಿಸಿದ್ದಾರೆ.
ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಂದ ಜಯ
ಮಾತು ಮುಂದುವರಿಸಿ, ಇಲ್ಲಿ ಸಿಎಂ ಆಗುತ್ತಿರುವುದು ಡಿ.ಕೆ. ಶಿವಕುಮಾರ್ ಎಂಬ ವ್ಯಕ್ತಿಯಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ. ವಿದ್ಯಾರ್ಥಿ ನಾಯಕನಾಗಿ ಬೆಳೆದು ಬಂದವನು ನಾನು. ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದು ಇಂದು ಈ ಉನ್ನತ ಸ್ಥಾನಕ್ಕೇರುತ್ತಿದ್ದಾನೆ. ಇದು ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಂದ ಜಯ ಎಂದು ತಿಳಿಸಿದರು.



