ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಪ್ರಯಾಣಿಕರ ಜವಾಬ್ದಾರಿಯುತ ವರ್ತನೆ ಹಾಗೂ ಪ್ರಯಾಣದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಬಲಪಡಿಸುವ ಉದ್ದೇಶದಿಂದ ವಿಶೇಷ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ.
ಮೆಟ್ರೋ ರೈಲುಗಳಲ್ಲಿ ಹೆಡ್ ಫೋನ್ ಇಲ್ಲದೆ ಸಂಗೀತ ಕೇಳುವುದು, ಆಹಾರ ಸೇವಿಸುವುದು ಅಥವಾ ತಂಬಾಕು ಸೇವನೆ ಮಾಡುವುದು ಸಹ ಪ್ರಯಾಣಿಕರಿಗೆ ತೊಂದರೆಯನ್ನು ಉಂಟುಮಾಡುತ್ತದೆ. ಅದೇ ರೀತಿ, ಹಿರಿಯ ನಾಗರಿಕರಿಗೆ, ಗರ್ಭಿಣಿ ಮಹಿಳೆಯರಿಗೆ, ಅಂಗವಿಕಲರಿಗೆ ಮತ್ತು ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಟ್ಟುಕೊಡುವುದು ಎಲ್ಲರ ಕರ್ತವ್ಯವಾಗಿದೆ.
ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಬಿಎಂಆರ್‌ಸಿಎಲ್ ವಿಶೇಷ ಜಾಗೃತಿ ಅಭಿಯಾನವನ್ನು, ಇಬ್ಬರು ಗೃಹ ರಕ್ಷಕರನ್ನೊಳಗೊಂಡ (ಹೋಮ್ ಗಾರ್ಡ್‌ಗಳು) ವಿಶೇಷ ತಂಡಗಳನ್ನು ಮೆಟ್ರೋ ರೈಲುಗಳಲ್ಲಿ ನಿಯೋಜಿಸಿ, ಪ್ರಯಾಣಿಕರಿಗೆ ತಿಳುವಳಿಕೆ ನೀಡುವ ಹಾಗೂ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿದೆ.
ಜೋರಾಗಿ ಸಂಗೀತ ಕೇಳುವುದು, ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಡದೆ ಬಳಸಿರುವುದು,ರೈಲುಗಳೊಳಗೆ ಆಹಾರ ಸೇವಿಸುತ್ತಿರುವುದು, ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿರುವುದು ಕಂಡುಹಿಡಿಯಲಾಗಿದೆ.
ಮೆಟ್ರೋ ರೈಲ್ವೇಸ್ (ಆಪರೇಷನ್ ಅಂಡ್ ಮೆಂಟೆನನ್ಸ್) ಕಾಯ್ದೆ, 2002ರ ಅಡಿಯಲ್ಲಿ, ಸಹ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದ್ಲಲಿ, ಕೆಲವು ಅಪರಾಧಗಳು ದಂಡಕ್ಕೆ ಒಳಪಡುತ್ತವೆ ಎಂಬುದನ್ನು ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ತಿಳಿಸಿದೆ .
ನಮ್ಮ ಮೆಟ್ರೋದಲ್ಲಿ ಪ್ರತಿಯೊಂದು ಪ್ರಯಾಣವೂ ಎಲ್ಲರಿಗೂ ಸುರಕ್ಷಿತ, ಆರಾಮದಾಯಕ ಮತ್ತು ಆನಂದಕರವಾಗಿರಲು ಸಹ ಪ್ರಯಾಣಿಕರ ಸೌಜನ್ಯ, ಸಹನೆ ಮತ್ತು ಪರಸ್ಪರ ಗೌರವವನ್ನು ತೋರಿಸುವಂತೆ ಬಿಎಂಆರ್‌ಸಿಎಲ್ ಎಲ್ಲಾ ಪ್ರಯಾಣಿಕರಿಗೆ ಮನವಿ ಮಾಡಿದೆ.



