ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪ್ರಸಿದ್ಧ ಕುರುಡುಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ ಹಾಗೂ ‘ಬೂತ್ ವಿಜಯ ಸಂಕಲ್ಪ ಯಾತ್ರೆ’ಯ ಭಾಗವಾಗಿ ವಿಜಯೇಂದ್ರ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಅ.1ರಿಂದ ಆರಂಭವಾಗಿರುವ ಈ ಅಭಿಯಾನದಲ್ಲಿ ಮೊದಲ ಹಂತದಲ್ಲಿ ಹಲವು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸುವ ಕಾರ್ಯಕ್ರಮವಿದೆ.
ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ ಸಂಕಲ್ಪ ಮಾಡಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ಹಾಗೂ ಕೆ.ಜಿಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಕಾರ್ಯಕರ್ತರು ಈ ಸೇವೆಯ ನೆನಪಿಗಾಗಿ ದೇವಸ್ಥಾನದ ಮುಂದೆ ಗಿಡಗಳನ್ನು ನೆಟ್ಟು ನಮ್ಮ ಮುಂದಿನ ಸಿಎಂ ವಿಜಯೇಂದ್ರ ಎಂದು ಜೈಕಾರ ಹಾಕಿದ್ದಾರೆ. ಆಗ ವಿಜಯೇಂದ್ರ ನನ್ನ ಬಗ್ಗೆ ಬೇಡ ಪ್ರಧಾನಿ ಮೋದಿ ಅವರಿಗೆ ಜೈಕಾರ ಹಾಕಿ ಎಂದು ಸೂಚಿಸಿದ್ದಾರೆ. ಇದರ ಜೊತೆಗೆ ಅಭಿಮಾನಿಯೊಬ್ಬರು ಮುಂದಿನ ಮುಖ್ಯಮಂತ್ರಿ ಎಂದು ಬರೆದಿರುವ ಫೋಟೊವೊಂದನ್ನು ಉಡುಗೊರೆಯಾಗಿ ನೀಡಲು ಆಗಮಿಸಿದ್ದಾರೆ. ಅದನ್ನು ನೋಡಿದ ವಿಜಯೇಂದ್ರ ಈ ರೀತಿ ಉಡುಗೊರೆ ಬೇಡ ಎಂದು ಹೇಳಿ ಹೋಗಿದ್ದಾರೆ.



