ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಚುನಾವಣೆಯಲ್ಲಿ ಹಿರಿಯ ನಟಿ ಜಯಮಾಲಾ ಅವರು ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ನಂತರ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದು, ನಿರ್ಗಮಿತ ಅಧ್ಯಕ್ಷ ನರಸಿಂಹಲು ಅವರು ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 1970ರ ದಶಕದಿಂದಲೂ ಸಕ್ರಿಯವಾಗಿರುವ ಜಯಮಾಲಾ, ನಟಿಯಾಗಿ ಮಾತ್ರವಲ್ಲದೆ ಆಡಳಿತಾತ್ಮಕ ಹುದ್ದೆಗಳಲ್ಲಿಯೂ ತಮ್ಮ ಅನುಭವವನ್ನು ತೋರಿಸಿದ್ದಾರೆ. ಈ ಹಿಂದೆ ಕೂಡ ಅವರು ಕೆಎಫ್‌ಸಿಸಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿ, ಚಿತ್ರೋದ್ಯಮದ ಸಮಸ್ಯೆಗಳು ಹಾಗೂ ಅಗತ್ಯಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಂಡಿದ್ದರು. ಹೀಗಾಗಿ ಅವರ ಮರು ಆಯ್ಕೆಯನ್ನು ಚಿತ್ರರಂಗದ ಹಲವರು ಸಕಾರಾತ್ಮಕವಾಗಿ ಸ್ವಾಗತಿಸಿದ್ದಾರೆ.
ನೂತನ ಅಧ್ಯಕ್ಷರ ಆಯ್ಕೆಯ ಬಳಿಕ ಚಿತ್ರರಂಗದ ವಿವಿಧ ವಲಯಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಈ ಕುರಿತು ಪ್ರತಿಕ್ರಿಯಿಸಿದ ನಿರ್ಮಾಪಕ ಕೆ. ಮಂಜು, “ಚಿತ್ರೋದ್ಯಮದ ಹಿತವನ್ನು ಗಮನದಲ್ಲಿಟ್ಟುಕೊಂಡು ಅನುಭವ ಹೊಂದಿರುವ ನಾಯಕತ್ವಕ್ಕೆ ಅವಕಾಶ ದೊರೆತಿದೆ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕು. ಜಯಮಾಲಾ ಅವರ ನೇತೃತ್ವದಲ್ಲಿ ಚಿತ್ರೋದ್ಯಮದ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿ” ಎಂದು ಹೇಳಿದರು.



