February 1, 2026
Sunday, February 1, 2026
spot_img

ಪ್ರವಾಸೋದ್ಯಮ ವಲಯಕ್ಕೂ ಭರ್ಜರಿ ಅನುದಾನ: ವಿದೇಶ ಪ್ರಯಾಣ ಇನ್ಮುಂದೆ ಅಗ್ಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ನಲ್ಲಿ ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ಮತ್ತು ಆದಾಯ ಸೃಷ್ಟಿಸುವ ಪ್ರವಾಸೋದ್ಯಮ ವಲಯಕ್ಕೂ ಸಾಕಷ್ಟು ಅನುದಾನ ಘೋಷಿಸಿದ್ದಾರೆ.

‘ರಾಷ್ಟ್ರೀಯ ಆತಿಥ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದ್ದೇವೆ. ಇದು ಶೈಕ್ಷಣಿಕ, ಕೈಗಾರಿಕೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು.

ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿಯೂ ಇಕೋ ಟೂರಿಸಂ ಅನ್ನು ಅಭಿವೃದ್ಧಿ ಪಡಿಸಲಾಗುವುದು . ಆಮೆಗಳ ವೀಕ್ಷಣಾ ಹಾದಿ ಯೋಜನೆಯಡಿ ಒಡಿಶಾ ಮತ್ತು ಕೇರಳದ ಜತೆಗೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಆಮೆಗಳ ಸಂತಾನೋತ್ಪತ್ತಿ ತಾಣಗಳಲ್ಲಿ ವೀಕ್ಷಣಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ವಿದೇಶ ಪ್ರವಾಸ ಇನ್ನು ಅಗ್ಗ
ವಿದೇಶ ಪ್ರವಾಸ ಮಾಡುವವರಿಗೂ ಕೇಂದ್ರ ಗುಡ್‌ನ್ಯೂಸ್‌ ನೀಡಿದೆ. ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮೇಲಿನ ತೆರಿಗೆಯನ್ನು (TCS) ಶೇ. 5-ಶೇ. 20ರಿಂದ ಶೇ. 2ಕ್ಕೆ ಇಳಿಸಲಾಗಿದೆ. ಇದರಿಂದ ಅಂತಾರಾಷ್ಟ್ರೀಯ ಪ್ರಯಾಣವನ್ನು ಬುಕ್ ಮಾಡುವಾಗ ಜನರು ಕಡಿಮೆ ತೆರಿಗೆ ಪಾವತಿಸಿದರೆ ಸಾಕು. ಇದರಿಂದ ವಿದೇಶ ಪ್ರವಾಸ ಪ್ಯಾಕೇಜ್‌ ಅಗ್ಗವಾಗಲಿದೆ.

ಅಲ್ಲದೆ ವಿದೇಶದಲ್ಲಿ ಶಿಕ್ಷಣ ಮತ್ತು ಚಿಕಿತ್ಸೆ ಪಡೆಯುವವರ ಹೊರೆಯೂ ತಗ್ಗಲಿದೆ. ಉದಾರೀಕೃತ ಹಣ ರವಾನೆ ಯೋಜನೆ (LRS)ಯಡಿ ವಿಧಿಸಲಾಗುವ ಟಿಸಿಎಸ್‌ ಅನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಲು ಪ್ರಸ್ತಾವಿಸಲಾಗಿದೆ. ಇದರಿಂದ ವಿದೇಶಕ್ಕೆ ಹಣ ಕಳುಹಿಸುವಾಗ ವಿಧಿಸಲಾಗುವ ಶುಲ್ಕವೂ ಕಡಿಮೆಯಾಗಲಿದೆ.

ಪೂರ್ವೋದಯ ರಾಜ್ಯಗಳಲ್ಲಿ 5 ಪ್ರವಾಸೋದ್ಯಮ ಕೇಂದ್ರಗಳು
ಸರ್ಕಾರವು 5 ಪೂರ್ವೋದಯ ರಾಜ್ಯಗಳಲ್ಲಿ (ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರ ಪ್ರದೇಶ) 5 ಪ್ರವಾಸೋದ್ಯಮ ತಾಣಗಳನ್ನು ರಚಿಸಲಿದೆ ಮತ್ತು 4,000 ಇ-ಬಸ್‌ಗಳಿಗೆ ಅವಕಾಶ ಕಲ್ಪಿಸಲಿದೆ. ದೇಶಾದ್ಯಂತ 20 ಪ್ರಸಿದ್ಧ ತಾಣಗಳಲ್ಲಿ 10,000 ಸಾವಿರ ಪ್ರಾವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗುತ್ತದೆ.

ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾಗಳಲ್ಲಿ ಬೌದ್ಧ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ ಮಠ ಸಂರಕ್ಷಣೆ ಮತ್ತು ಸಂಪರ್ಕವೂ ಸೇರಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಶೇಷ ಪರ್ವತ ರೈಲುಗಳು ರಮಣೀಯ ರೈಲು ಪ್ರವಾಸೋದ್ಯಮವನ್ನು ಹೆಚ್ಚಿಸುವ ಮತ್ತು ಬೆಟ್ಟದ ತಾಣಗಳಿಗೆ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !