February 2, 2026
Monday, February 2, 2026
spot_img

ಕಾನೂನು ಸಂಕಷ್ಟಕ್ಕೆ ಹೆದರಿ ಗರ್ಭಿಣಿ ಪತ್ನಿಯನ್ನು ಬಿಟ್ಟು ಆತ್ಮಹ*ತ್ಯೆಗೆ ಶರಣಾದ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತೀ ಚಿಕ್ಕ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯ ಬದುಕಿನಲ್ಲಿ ಕಾನೂನಿನ ಚಕ್ರವ್ಯೂಹ ವಿಧಿಯಾಟವಾಡಿದೆ. ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ ಪೋಕ್ಸೋ ಪ್ರಕರಣ ಎದುರಿಸುತ್ತಿದ್ದ 19 ವರ್ಷದ ಯುವಕನೊಬ್ಬ, ಕಾನೂನು ಕ್ರಮದ ಭೀತಿಯಿಂದ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ದಿಗವಮಾರಪ್ಪಗಾರಿಪಲ್ಲಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಮಂಜುನಾಥ್ (19) ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಸಾತನೂರು ಮೂಲದ 16 ವರ್ಷದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇತ್ತೀಚೆಗೆ ಆಕೆ ಅನಾರೋಗ್ಯಕ್ಕೆ ಒಳಗಾದಾಗ ಬಾಗೇಪಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿಯ ವಯಸ್ಸು ಇನ್ನೂ 18 ತುಂಬಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿ ಪ್ರಸ್ತುತ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಆಕೆಯನ್ನು ಸರ್ಕಾರಿ ಬಾಲಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ಇತ್ತ ಬಾಲಕಿಯ ವಯಸ್ಸು ಕಡಿಮೆ ಇದ್ದ ಕಾರಣ ಮಂಜುನಾಥ್ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಅಡಿಯಲ್ಲಿ ಕೇಸ್ ದಾಖಲಾಗಿತ್ತು.

ಪೊಲೀಸ್ ಕೇಸ್ ಮತ್ತು ಜೈಲು ಶಿಕ್ಷೆಯಾಗಬಹುದು ಎಂಬ ತೀವ್ರ ಆತಂಕಕ್ಕೆ ಒಳಗಾದ ಮಂಜುನಾಥ್, ಮಾನಸಿಕವಾಗಿ ಕುಸಿದು ವಿಷಸೇವಿಸಿದ್ದನು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಒಂದು ಸಣ್ಣ ವಯಸ್ಸಿನ ಅವಿವೇಕದ ನಿರ್ಧಾರ ಹಾಗೂ ಕಾನೂನಿನ ಅರಿವಿಲ್ಲದ ಕಾರಣ, ಒಂದು ಸುಂದರ ಸಂಸಾರ ಈಗ ಕಣ್ಣೀರಿನಲ್ಲಿ ಮುಳುಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !