October 31, 2026
Saturday, October 31, 2026
spot_img

ಪಟಾಕಿ ಲೈಸೆನ್ಸ್ ನೀಡಲು ಲಂಚ: ತುಮಕೂರು ಡಿಸಿ ಕಚೇರಿ ತಹಸೀಲ್ದಾರ್ ‘ಲೋಕಾ’ ಬಲೆಗೆ

ಹೊಸದಿಗಂತ ವರದಿ ತುಮಕೂರು:

ಪಟಾಕಿ ಮಾರಾಟ ಹಾಗೂ ದಾಸ್ತಾನು ಪರವಾನಗಿ (ಲೈಸೆನ್ಸ್) ನೀಡಲು ಲಂಚ ಸ್ವೀಕರಿಸುತ್ತಿದ್ದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ಗ್ರೇಡ್-1 ಕಚೇರಿ ಸಹಾಯಕ (ತಹಸೀಲ್ದಾರ್) ಮುರಳೀಧರ್ ಬುಧವಾರ ಲೋಕಾಯುಕ್ತ ಪೊಲೀಸರ  ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಹೆಗ್ಗೆರೆ ನಿವಾಸಿ ಉಮಾಶಂಕರ್ ಎಸ್.ಸಿ ಎಂಬವರು ನಗರದಲ್ಲಿ ಪಟಾಕಿ ಮಾರಾಟ ಮಳಿಗೆ ತೆರೆಯಲು ಹಾಗೂ ದಾಸ್ತಾನು ಲೈಸೆನ್ಸ್ ಕೋರಿ ಸೆ. 25 ರಂದು ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅ. 6 ರಂದು ಕಚೇರಿಗೆ ತೆರಳಿ ವಿಚಾರಿಸಿದಾಗ, ವಿವಿಧ ಇಲಾಖೆಗಳಿಗೆ ಪತ್ರ ವ್ಯವಹಾರ ನಡೆಸಲು ಆರೋಪಿ ಮುರಳೀಧರ್ ಒಟ್ಟು 2,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 1,000 ರೂಪಾಯಿಯನ್ನು ಮುಂಗಡವಾಗಿ ಪಡೆದು, ಉಳಿದ 1,000 ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು.

ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಅ. 7 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದೇ ದಿನ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಳಿಕೆ 1,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಆರೋಪಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

ಇದನ್ನೂ ಓದಿ:

​ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕಿ ನಿರ್ಮಲ.ವಿ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿಗಳಾದ ಡಾ. ಸಂತೋಷ್.ಕೆ.ಎಂ, ಮಂಜುನಾಥ.ಎಂ, ಇನ್ಸ್‌ಪೆಕ್ಟರ್‌ಗಳಾದ ರಾಘವೇಂದ್ರ.ಜಿ.ಕೆ, ರಾಜು.ಟಿ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಸಾರ್ವಜನಿಕ ಕೆಲಸಗಳಿಗಾಗಿ ಸರ್ಕಾರಿ ನೌಕರರು ಯಾರಾದರೂ ಲಂಚದ ಬೇಡಿಕೆ ಇಟ್ಟರೆ, ಕೂಡಲೇ ಸ್ಥಳೀಯ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Must Read