October 7, 2026
Wednesday, October 7, 2026
spot_img

ಕೊನೆಗೂ ಜಿ.ಪಂ, ತಾ.ಪಂ ಚುನಾವಣೆಗೆ ಮುಹೂರ್ತ ಫಿಕ್ಸ್: ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಿದ ರಾಜ್ಯ ಸರ್ಕಾರ

ಹೊಸದಿಗಂತ ವರದಿ ಬೆಂಗಳೂರು:

ಕೊನೆಗೂ ಹಲವು ವರ್ಷಗಳಿಂದ ಬಾಕಿ ಇದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸುವ ಮೂಲಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಅಕ್ಟೋಬರ್ 6 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು. 2027 ರ ಜನವರಿ ಮೊದಲ ವಾರದಲ್ಲಿ ಚುವಾವಣೆ ನಡೆಸಲು ತೀರ್ಮಾನಿಸಲಾಗಿತ್ತು. ಇದೀಗ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಿದ್ದು, ಮಹಿಳೆಯರಿಗೆ ಶೇ.50 ರಷ್ಟು ಸ್ಥಾನ ನೀಡಲಾಗಿದೆ.

ರಾಜ್ಯದಲ್ಲಿ ಒಟ್ಟು 31 ಜಿಲ್ಲೆಗಳ 1,129 ಜಿಲ್ಲಾ ಪಂಚಾಯಿತಿ ಸ್ಥಾನ ಹಾಗೂ 3,656 ತಾಲೂಕು ಪಂಚಾಯಿತಿ ಸ್ಥಾನಗಳ ವರ್ಗವಾರು ಮೀಸಲಾತಿ ಪ್ರಕಟಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಬುಧವಾರ ಅಧಿಕೃತ ಕರಡು ಅಧಿಸೂಚನೆ ಹೊರಡಿಸಿದೆ.

ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನ:

ರಾಜ್ಯದಲ್ಲಿ 31 ಜಿಲ್ಲೆಗಳಿಂದ ಒಟ್ಟು 1,129 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು, ಈ ಪೈಕಿ ಎಸ್‌ಸಿ, ಎಸ್‌ಟಿ, ಹಿಂದೂಳಿದ ವರ್ಗ ಎ, ಬಿ ವರ್ಗವಾರು ಮೀಸಲಾತಿ ಪ್ರಕಟಿಸಿದೆ. ಪರಿಶಿಷ್ಟ ಜಾತಿ 225, ಪರಿಶಿಷ್ಟ ಪಂಗಡಕ್ಕೆ 102 ಸ್ಥಾನ ಮೀಸಲಿಡಲಾಗಿದೆ. ಇನ್ನು ಹಿಂದುಳಿದ ವರ್ಗ ಎ-183, ಹಿಂದುಳಿದ ವರ್ಗ ಬಿ-43 ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳನ್ನು ನಿಗಧಿಪಡಿಸಲಾಗಿದೆ.

ತಾಲೂಕು ಪಂಚಾಯಿತಿಗೂ ಮೀಸಲಾತಿ ಪ್ರಕಟ

ರಾಜ್ಯದಲ್ಲಿ ಒಟ್ಟು 3,656 ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳಿವೆ. ಈ ಪೈಕಿ ಪರಿಶಿಷ್ಟ ಜಾತಿಗೆ 733, ಪರಿಶಿಷ್ಟ ಪಂಗಡಕ್ಕೆ 394 ಸ್ಥಾನ ಮೀಸಲಿಡಲಾಗಿದೆ. ಹಾಗೇ ಹಿಂದುಳಿದ ವರ್ಗ ಅ-508, ಹಿಂದುಳಿದ ವರ್ಗ ಬ-111 ಸ್ಥಾನ, ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳು ಮೀಸಲಿಡಲಾಗಿದೆ.

ಒಟ್ಟಾರೆ ಅವಧಿ ಮುಗಿದು 6 ವರ್ಷಗಳ ನಂತರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಭರವಸೆ ಮೂಡಿದ್ದು, ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಚುನಾವಣಾ ಕಾವು ನಿಧಾನಕ್ಕೆ ಏರಲಿದೆ.

ಮಹಿಳೆಯರಿಗೆ ಶೆ.50 ಮೀಸಲು ಒಟ್ಟು ಸ್ಥಾನಗಳ ಪೈಕಿ ಎಲ್ಲಾ ವರ್ಗದಿಮದಲೂ ಸೇರಿ ಮಹಿಳೆಯರಿಗೆ ಶೇ.50 ಸ್ಥಾನ ಮೀಸಲಿರಿಸಲಾಗಿದೆ. 1,129 ಜಿಲ್ಲಾ ಪಾಂಚಾಯತಿ ಸ್ಥಾನಗಳ ಪೈಕಿ ಅರ್ಧದಷ್ಟು ಅಂದರೆ 571 ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗಿದೆ. 3,656 ತಾಲೂಕು ಪಂಚಾಯತಿ ಸ್ಥಾನಗಳ ಪೈಕಿ ಶೇ.50 ರಷ್ಟು ಅಂದರೆ 1,905 ಮಹಿಳೆಯರಿಗೆ ನಿಗಧಿಪಡಿಸಲಾಗಿದೆ.

ಇದನ್ನೂ ಓದಿ:

2027 ಜನವರಿ ಮೊದಲ ವಾರದಲ್ಲೇ ಎಲೆಕ್ಷನ್

ಸ್ಥಳೀಯ ಆಡಳಿವಾದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬಗ್ಗೆ ಮಂಗಳವಾರದ ನಡೆದಿದ್ದ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಜನವರಿ ಮೊದಲ ವಾರದಲ್ಲಿ ಅಂದರೆ ಜನವರಿ 15ರೊಳಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿಯ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಾಗಿ ಮತಪೆಟ್ಟಿಗೆಗಳನ್ನು ಬಳಸಲು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಈ ಬಾರಿ ನಡೆಯುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಇವಿಎಂ ಮಷಿನ್‌ ಬದಲಾಗಿ ಬ್ಯಾಲೆಟ್ ಪೇಪರ್‌ ಬಳಕೆಯಾಗಲಿದೆ.

Must Read