October 7, 2026
Wednesday, October 7, 2026
spot_img

ಕತ್ರಿನಾ ಕೈಫ್ ಪರ ಬ್ಯಾಟ್ ಬೀಸಿದ ರಜನಿ ಪುತ್ರಿ: ಹೆರಿಗೆಯ ನಂತರದ ಬಾಡಿ ಶೇಮಿಂಗ್‌ಗೆ ತೀವ್ರ ಆಕ್ಷೇಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಅವರು ತಾಯಿಯಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ದೈಹಿಕ ಬದಲಾವಣೆಗಳ ಕುರಿತು ನಡೆದಿದ್ದ ಬಾಡಿ ಶೇಮಿಂಗ್ ಮತ್ತು ಟ್ರೋಲಿಂಗ್ ವಿರುದ್ಧ ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ, ಖ್ಯಾತ ನಿರ್ದೇಶಕಿ ಸೌಂದರ್ಯ ರಜನಿಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಮೇಲಿನ ಇಂತಹ ಕ್ರೂರ ವಿಮರ್ಶೆಗಳು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಗಣೇಶ ಚತುರ್ಥಿ ಸಂಭ್ರಮದಲ್ಲಿ ನಡೆದಿದ್ದ  ಟ್ರೋಲಿಂಗ್

ಕಳೆದ ವರ್ಷ ನವೆಂಬರ್‌ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ತಮ್ಮ ಮೊದಲ ಗಂಡು ಮಗು ‘ವಿಹಾನ್’ಗೆ ಜನ್ಮ ನೀಡಿದ್ದರು. ಹೆರಿಗೆಯ ನಂತರ ಸೆಪ್ಟೆಂಬರ್‌ನಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆಯ ವೇಳೆ ಕತ್ರಿನಾ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಕೆಲವು ನೆಟ್ಟಿಗರು ಅವರ ದೈಹಿಕ ತೂಕ ಮತ್ತು ಮುಖದ ಬದಲಾವಣೆಗಳ ಬಗ್ಗೆ ಅತ್ಯಂತ ಅಸಭ್ಯವಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದರು.

ಕತ್ರಿನಾ ಪರ ಬ್ಯಾಟ್ ಬೀಸಿದ ಸೌಂದರ್ಯ

ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ತಮ್ಮ ಸ್ವಂತ ಹೆರಿಗೆಯ ಅನುಭವಗಳನ್ನು ಹಂಚಿಕೊಳ್ಳುತ್ತಾ ಕತ್ರಿನಾ ಪರ ಬ್ಯಾಟ್ ಬೀಸಿದ ಸೌಂದರ್ಯ ರಜನಿಕಾಂತ್, ‘ನನಗೂ ಇಬ್ಬರು ಮಕ್ಕಳಿದ್ದಾರೆ, ತಾಯಿಯಾಗುವುದು ಅಷ್ಟು ಸುಲಭವಲ್ಲ. ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಮಹಿಳೆಯ ದೇಹದಲ್ಲಿ ಭಾರಿ ಬದಲಾವಣೆಗಳಾಗುತ್ತವೆ. ಅದರಲ್ಲೂ 35 ವರ್ಷ ದಾಟಿದ ಮೇಲೆ ಮಗುವಿಗೆ ಜನ್ಮ ನೀಡುವುದು ಇನ್ನು ಕಷ್ಟ. ನಾನು ನನ್ನ ಎರಡನೇ ಮಗುವಿಗೆ ಜನ್ಮ ನೀಡಿದಾಗ ನನಗೆ 25 ವರ್ಷ ದಾಟಿತ್ತು. ಮಹಿಳೆಯೊಬ್ಬಳು ದೈಹಿಕವಾಗಿ ಏನನ್ನು ಸಾಧಿಸುತ್ತಾಳೋ ಅದಕ್ಕೆ ಗೌರವ ನೀಡಬೇಕು’ ಎಂದು ಖಡಕ್ ಆಗಿ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ನಾವು ಪುರುಷರನ್ನು ನೀವು ಯಾಕೆ ಗರ್ಭಿಣಿಯಾಗಲ್ಲ? ಎಂದು ಕೇಳುತ್ತಿಲ್ಲ. ಆದರೆ ಮಹಿಳೆಯೊಬ್ಬಳು ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿ ಮಗುವಿಗೆ ಜನ್ಮ ನೀಡಿದಾಗ ಅವಳನ್ನು ಈ ರೀತಿ ಜಡ್ಜ್ ಮಾಡುವುದು ಎಷ್ಟು ಸರಿ? ಕತ್ರಿನಾ ಅವರಿಗೆ ಆ ರೀತಿ ಟ್ರೋಲ್ ಆದಾಗ ನನ್ನ ಹೃದಯ ಮರುಗಿತು. ಮಹಿಳೆಯರು ಜೀವನದಲ್ಲಿ ಅದೆಷ್ಟೋ ನೋವುಗಳನ್ನು ಅನುಭವಿಸುತ್ತಾರೆ, ಆದರೆ ಮಹಿಳೆಯಾಗಿ ಹುಟ್ಟಿರುವುದೇ ಒಂದು ವಿಶೇಷ ಎಂದು ಭಾವುಕರಾಗಿದ್ದಾರೆ.

ಈಗಾಗಲೇ ಕತ್ರಿನಾ ಕೈಫ್ ಅವರ ಬೆಂಬಲಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್, ಪರಿಣೀತಿ ಚೋಪ್ರಾ ಹಾಗೂ ಹಿರಿಯ ನಟಿ ಖುಷ್ಬೂ ಸುಂದರ್ ಸೇರಿದಂತೆ ಹಲವು ಗಣ್ಯರು ಧ್ವನಿ ಎತ್ತಿದ್ದು, ಸಿನಿತಾರೆಯರ ಮೇಲೆ ಇಂತಹ ಟ್ರೋಲ್‌ ಮಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

Must Read

Skip to toolbar